ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಅವರ ವಿರುದ್ಧ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಕುಸುಮ ನಡುವಿನ ಕಿತ್ತಾಟ ಮುಂದುವರಿಯುತ್ತಲೇ ಇದೆ.
ಇತ್ತೀಚೆಗಷ್ಟೆ ಪಟಾಕಿ ಹಂಚುವುದನ್ನು ತಡೆದಿದ್ದು ಕುಸುಮ ಕುತಂತ್ರ ಎಂದು ಕಿಡಿಕಾರಿದ್ದ ಮುನಿರತ್ನ ಮತ್ತೊಮ್ಮೆ ವಾಕ್ಸಮರ ನಡೆಸಿದ್ದರು. ಇನ್ನು ಇದೀಗ ಕುಸುಮ ಅಭಿಮಾನಿಗಳ ಇನ್ಸ್ಟಾಗ್ರಾಮ್ ಖಾತೆ ʼಟೀಮ್ ಕುಸುಮʼದಲ್ಲಿ ವಿಡಿಯೊವೊಂದನ್ನು ಹರಿಬಿಡಲಾಗಿದ್ದು, ಇದು ಎಲ್ಲೆಡೆ ಭಾರೀ ವೈರಲ್ ಆಗಿದೆ.
ಹೌದು, ಈ ಹಿಂದೆ ಬಿಬಿಎಂಪಿ ಗುತ್ತಿಗೆದಾರನ ಜತೆ ಮೊಬೈಲ್ ಕರೆಯಲ್ಲಿ ಮಾತನಾಡುವ ವೇಳೆ ಮುನಿರತ್ನ ಅವಾಚ್ಯ ಶಬ್ದಗಳನ್ನು ಬಳಸಿ, ದಲಿತ ಹಾಗೂ ಒಕ್ಕಲಿಗ ಜಾತಿಗಳನ್ನು ಉಲ್ಲೇಖಿಸಿ ಜಾತಿನಿಂದನೆಯನ್ನೂ ಸಹ ಮಾಡಿದ್ದಾರೆ ಎಂದು ಹೇಳಿ ಆಡಿಯೊವೊಂದು ವೈರಲ್ ಆಗಿತ್ತು. ಈ ಕುರಿತು ಎಫ್‌ಐಆರ್ ದಾಖಲಾಗಿತ್ತು, ಮುನಿರತ್ನ ಬಂಧನವಾಗಿ ಬಿಡುಗಡೆ ಸಹ ಆಗಿದ್ದರು.
ಅದೇ ಆಡಿಯೊ ಇತ್ತೀಚೆಗೆ ನಡೆದ ವೇದಿಕೆ ಕಾರ್ಯಕ್ರಮವೊಂದರ ಸಮಯದಲ್ಲಿ ಸ್ಪೀಕರ್‌ನಲ್ಲಿ ಪ್ರಸಾರವಾಗಿದೆ ಎಂದು ಟೀಮ್ ಕುಸುಮ ಪೇಜ್‌ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಆದಿಚುಂಚನಗಿರಿ ಸ್ವಾಮೀಜಿಗಳ ಪಕ್ಕ ಮುನಿರತ್ನ ಕುಳಿತಿದ್ದು ಈ ಸಮಯದಲ್ಲಿ ಆಡಿಯೊ ಪ್ರಸಾರವಾಗಿದೆ.
ಸ್ವಾಮೀಜಿಗಳು ಮಾತನಾಡಬೇಕೆಂದು ಕೈಗೆ ಮೈಕ್ ಎತ್ತಿಕೊಂಡ ಕೂಡಲೇ ಈ ಆಡಿಯೊ ಪ್ರಸಾರವಾಗಿದ್ದು, ವೇದಿಕೆ ಮೇಲಿದ್ದವರು ಕೆಲ ಕಾಲ ಗಾಬರಿಯಾಗಿದ್ದಾರೆ. ಅಲ್ಲದೇ ದಯವಿಟ್ಟು ಅದನ್ನು ಯಾರು ಹಾಕಿದ್ದೀರೋ ಅವರು ಆಫ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದೂ ಸಹ ವಿಡಿಯೊದಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


