ಬೆಂಗಳೂರು: ನವೆಂಬರ್ 2ರಂದು ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವನಿತೆಯರ ಏಕದಿನ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಗೆಲುವನ್ನು ದಾಖಲಿಸಿ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಈ ಮೂಲಕ ಕಪಿಲ್ ದೇವ್, ಎಂ ಎಸ್ ಧೋನಿ ಬಳಿಕ ಭಾರತಕ್ಕೆ ಐಸಿಸಿ ಏಕದಿನ ವಿಶ್ವಕಪ್ ತಂದುಕೊಟ್ಟ ಕೀರ್ತಿಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾಜನರಾದರು. ಹೀಗೆ ಮಹಾ ದಾಖಲೆ ಬರೆದ ಟೀಮ್ ಇಂಡಿಯಾ ಆಟಗಾರ್ತಿಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
ಆದರೆ ಈ ಪೈಕಿ ಜೆಮಿಮಾ ರೊಡ್ರಿಗ್ಸ್ ವಿರುದ್ಧ ಮಾತ್ರ ದೊಡ್ಡ ಮಟ್ಟದಲ್ಲಿ ವೈಯಕ್ತಿಕ ಟೀಕೆಯ ಪೋಸ್ಟ್‌ಗಳು ಹರಿದಾಡಿದವು. ಹೌದು, ದೈತ್ಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರೊಡ್ರಿಗ್ಸ್ ಅಜೇಯ 127 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಬಳಿಕ ಮಾತನಾಡಿದ್ದ ಜೆಮಿಮಾ ಯೇಸುಕ್ರಿಸ್ತ ತನ್ನ ಆಟಕ್ಕೆ ಕಾರಣ ಎಂದಿದ್ದರು. ಹೀಗೆ ಜೆಮಿಮಾ ಹೇಳಿಕೆ ಹೊರಬೀಳುತ್ತಿದ್ದಂತೆ ಇತರೆ ಕೋಮಿನ ಕೆಲ ಕೋಮುಗಲಭೆ ಪ್ರಿಯರ ಜೆಮಿಮಾ ವಿರುದ್ಧ ಟ್ರೋಲ್ ಮಾಡಿದ್ದರು.
ಆದರೆ ಇದೀಗ ಆ ರೀತಿ ಟ್ರೋಲ್ ಮಾಡಿದವರಿಗೆ ವಿಡಿಯೊವೊಂದನ್ನು ಹಂಚಿಕೊಂಡಿರುವ ನೆಟ್ಟಿಗರು ಜೆಮಿಮಾ ಪರ ಬ್ಯಾಟ್ ಬೀಸಿದ್ದಾರೆ. ಅಂದು ಯೇಸು ಹೊಗಳಿದ ಜೆಮಿಮಾ ಕಪ್ ಗೆದ್ದ ಬಳಿಕ ವಿಮಾನ ನಿಲ್ದಾಣದಲ್ಲಿ ಗಗನಸಖಿಯರು ಹಣೆಗೆ ಕುಂಕುಮ ಇಡಲು ಬಂದಾಗ ಅದನ್ನು ತಿರಸ್ಕರಿಸದೇ ಸ್ವೀಕರಿಸಿದ್ದಾರೆ. ಆದರೆ ಸ್ಮೃತಿ ಮಂಧಾನ ಮಾತ್ರ ತಿಲಕ ಬೇಡ ಎಂದು ತಿರಸ್ಕರಿಸಿ ಕೇವಲ ಹೂ ಪಡೆದು ತೆರಳಿದ್ದಾರೆ. ಇದೇ ಕೆಲಸವನ್ನು ಜೆಮಿಮಾ ಮಾಡಿಬಿಟ್ಟಿದ್ದರೆ ಕೋಮುಗಲಭೆ ಪ್ರಿಯರು ಭಾರೀ ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಿಬಿಡುತ್ತಿದ್ದರು ಎಂದು ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


