“ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಈಗಾಗಲೇ ಅಭ್ಯರ್ಥಿಗಳ ತರಬೇತಿ ನಡೆಯುತ್ತಿದ್ದು, ಮೂರು ತಿಂಗಳ ಒಳಗಾಗಿ ಖಾಲಿ ಇರುವ ಸ್ಥಳಗಳಲ್ಲಿ ಪಿಎಸ್‍ಐ ಹುದ್ದೆಗಳನ್ನು ಭರ್ತಿ ಮಾಡಲಾಗುವುದು” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಮೂಡಬಿದ್ರೆ, ಮುಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಒದಗಿಸಿಕೊಡುವ ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕ ಉಮಾನಾಥ್ ಅವರು ಪ್ರಶ್ನಿಸಿದ್ದರು.
ಡಾ. ಜಿ. ಪರಮೇಶ್ವರ್ ಉತ್ತರ ನೀಡಿ, “ಕಳೆದ 5 ವರ್ಷಗಳಿಂದಲೂ ಪಿಎಸ್‍ಐಗಳ ನೇಮಕಾತಿ ಆಗಿಲ್ಲ. ಈ ಹಿಂದೆ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ನಡೆದಂತಹ ಪ್ರಕರಣವನ್ನು ಬಗೆಹರಿಸಿ, ನೇಮಕಾತಿ ಮಾಡಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ತರಬೇತಿಗಾಗಿ ನಿಯೋಜಿಸಲಾಗಿದೆ” ಎಂದರು.
“ಮೂರು ತಿಂಗಳಲ್ಲಿ ತರಬೇತಿ ಪೂರ್ಣಗೊಳ್ಳಲಿದ್ದು, ಬಳಿಕ ಖಾಲಿ ಇರುವೆಡೆ, ಅಗತ್ಯ ಇರುವ ಕಡೆಗಳಲ್ಲಿ ಪಿಎಸ್‍ಐಗಳ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿಯೂ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯಾಗಿ ಬಂದ ಬಳಿಕ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು” ಎಂದು ಹೇಳಿದರು.
“ಕರಾವಳಿ ಮುಂತಾದೆಡೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯ ಪಡೆಯನ್ನು ನೇಮಿಸಿದ್ದೇವೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ನಾವು ಜಾರಿ ಮಾಡಿದ್ದು, 50 ಮನೆಗೆ ಒಂದು ಕ್ಲಸ್ಟರ್‌ನಂತೆ ಮಾಡಿ, ಪೊಲೀಸ್ ಕಾನ್ಸ್‌ಟೇಬಲ್ ಅವರು ಮನೆ ಮನೆಗೆ ಭೇಟಿ ನೀಡಿ, ಆಯಾ ಮನೆಗಳಲ್ಲಿನ ಕುಟುಂಬಗಳಿಂದ ಸಮಸ್ಯೆಗಳ ಬಗ್ಗೆ ನಿಗದಿತ ಪ್ರಶ್ನೆಗಳನ್ನು ಕೇಳಿ ವಿವರ ಪಡೆದು, ಕ್ರಮ ವಹಿಸಿದ್ದು, ಇದು ಜನರಿಂದಲೂ ಪ್ರಶಂಸೆಗೆ ಒಳಗಾಗಿದೆ” ಎಂದು ತಿಳಿಸಿದರು.
“ಮಹಿಳೆಯರ ಸುರಕ್ಷತೆಗಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಕ್ಕ-ಪಡೆ ರಚಿಸಲಾಗುತ್ತಿದ್ದು, ಇದೂ ಕೂಡ ಮೆಚ್ಚುಗೆ ಪಡೆದುಕೊಂಡಿದೆ. ರಾಜ್ಯದಲ್ಲಿ ಇದರಿಂದ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತಿದೆ. ವಿಶೇಷವಾಗಿ ಕರಾವಳಿ ಪ್ರದೇಶವನ್ನು ಸುರಕ್ಷಿತ ಪ್ರದೇಶವಾಗಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಸಚಿವರು ವಿವರಣೆ ನೀಡಿದರು.
23 ಕಂಬಳಕ್ಕೆ ತಲಾ 5 ಲಕ್ಷ ರೂ. ಬಿಡುಗಡೆ: ಜಿಲ್ಲಾ ಕಂಬಳ ಸಮಿತಿಯಿಂದ ಅನುಮೋದನೆಗೊಂಡ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 23 ಕಂಬಳೋತ್ಸವಗಳಿಗೆ ಸರ್ಕಾರದಿಂದ ತಲಾ ರೂ. 5 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2025-26ನೇ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗುವ ಕಂಬಳ ಉತ್ಸವಗಳಿಗೆ ಅನುದಾನ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿವೆ ಎಂದರು.
ಇದಕ್ಕೆ ಸರ್ಕಾರದಿಂದ ಅನುಮೋದನೆ ನೀಡಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಕಡತ ರವಾನಿಸಲಾಗಿದೆ. 2024-25ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ,ಮಂಗಳೂರು, ನರಿಂಗಾಣ, ಮೂಡಬಿದ್ರೆ, ಐಕಳ, ಜಪ್ಪು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಮತ್ತು ವೇಣೂರಿನಲ್ಲಿ ಆಯೋಜಿಸಿದ್ದ ಕಂಬಳೋತ್ಸವಗಳಿಗೆ ತಲಾ ರೂ. 5 ಲಕ್ಷದಂತೆ ಒಟ್ಟು ರೂ. 50 ಲಕ್ಷಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದರು.
ಶಾಸಕರುಗಳ ಅಭಿಪ್ರಾಯದಂತೆ 23 ಕಂಬಳೋತ್ಸವಗಳಿಗೆ ಅನುದಾನ ಬಿಡುಗಡೆ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ಸಚಿವ ಹೆಚ್.ಕೆ.ಪಾಟೀಲ್ ನೀಡಿದರು. ಸಚಿವರ ನಿರ್ಧಾರವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡದ ಶಾಸಕರುಗಳು ಒಕ್ಕೊರಲಿನಿಂದ ಅಭಿನಂದಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


