ಬೆಂಗಳೂರು: ನಿನ್ನೆಯಿಂದ (ಫೆಬ್ರವರಿ 9) ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಿದ್ದು, ಪ್ರಯಾಣಿಕರಿಂದ ತೀವ್ರ ಟೀಕೆಗೆ ಒಳಗಾಗಿದೆ.
ಈ ಹಿಂದಿನ ದರಕ್ಕೂ ಈಗಿನ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುತ್ತಿರುವ ಪ್ರಯಾಣಿಕರು ಮೆಟ್ರೋ ಯಾಕಯ್ಯ, ಬೈಕು, ಕ್ಯಾಬೇ ಲೇಸಯ್ಯಾ ಎನ್ನುತ್ತಿದ್ದಾರೆ.
ಹೌದು, ಸಾಲು ಸಾಲು ಬೆಲೆ ಏರಿಕೆಗಳಿಂದ ಬೇಸತ್ತಿರುವ ಜನ ಸಾಮಾನ್ಯರಿಗೆ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಬಿಎಂಆರ್‌ಸಿಎಲ್‌ನ ಈ ನಿರ್ಣಯಕ್ಕೆ ಜನ ಧಿಕ್ಕಾರ ಹಾಕುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶಗಳನ್ನು ಹೊರಹಾಕಿದ್ದಾರೆ.
“ಈ ಹಿಂದೆ ಬನಶಂಕರಿಯಿಂದ ಮೆಜೆಸ್ಟಿಕ್‌ಗೆ 26 ರೂಪಾಯಿಗಳನ್ನು ಕೊಟ್ಟು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ, ಆದರೆ ಈಗ 40 ರೂಪಾಯಿಗಳಾಗಿವೆ. ಇದರ ಬದಲು 173 ರೂಪಾಯಿಗಳಿಗೆ ಮಿನಿ ಕ್ಯಾಬ್ ಲಭ್ಯವಿದ್ದು, ನಾಲ್ವರು ಇದರಲ್ಲಿ ಪ್ರಯಾಣಿಸಿದರೆ ತಲಾ 43. 25 ಆಗಲಿದೆ. ನಮ್ಮ ಮೆಟ್ರೋದಲ್ಲಿ ಹೋಗುವ ಬದಲು ಕಾರ್ ಬುಕ್ ಮಾಡಿಕೊಂಡೇ ಹೋಗಬಹುದು. ಅಷ್ಟರಮಟ್ಟಿಗೆ ಮೆಟ್ರೋ ಟಿಕೆಟ್ ದರ ಏರಿಸಲಾಗಿದೆ” ಎಂದು ನಾಯಕ ಎಂಬುವವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮತ್ತೋರ್ವ ನೆಟ್ಟಿಗ ಈ ಮೆಟ್ರೋ ಟಿಕೆಟ್ ದರ ಏರಿಕೆ ಕುರಿತು ಬರೆದುಕೊಂಡಿದ್ದು, “ನಾನು ಪ್ರತಿದಿನ 70 ಕಿಲೋಮೀಟರ್ ಮೆಟ್ರೋನಲ್ಲಿ ಹೋಗುವ ಬದಲು ಬೈಕ್‌ನಲ್ಲಿ ಹೋಗುವುದು ಅಗ್ಗ. ಎಂತಹ ವ್ಯಂಗ್ಯ. ಪರ್ಸನಲ್ ಟ್ರಾವೆಲ್‌ಗಿಂತ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ದುಬಾರಿ. ಬಿಎಂಆರ್‌ಸಿಎಲ್‌ಗೆ ನಾಚಿಕೆಯಾಗಬೇಕು” ಎಂದು ಕಿಡಿಕಾರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


