ದುಬೈ: ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಳ್ಳುವುದರ ಮೂಲಕ ಮತ್ತೊಂದು ಮೈಲಿಗಲ್ಲು ನೆಟ್ಟಿದೆ.
ಕಳೆದ ದಶಕದ ದ್ವಿತೀಯಾರ್ಧದಲ್ಲಿ ಸಾಲು ಸಾಲು ಟ್ರೋಫಿಗಳನ್ನು ಸೋತಿದ್ದ ಟೀಮ್ ಇಂಡಿಯಾ ಇದೀಗ ಸತತವಾಗಿ ಟಿ ಟ್ವೆಂಟಿ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅಧಿಪತ್ಯ ನಡೆಸಿದೆ.
ನಿನ್ನೆ ( ಮಾರ್ಚ್ 9 ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್‌ಗಳ ಗೆಲುವು ಕಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ.
50 ಒವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254ರನ್ ಬಾರಿಸಿತು.
ಈ ದಿಗ್ವಿಜಯದ ಬೆನ್ನಲ್ಲೇ ಭಾರತ ತಂಡಕ್ಕೆ ಟ್ರೋಫಿ ಪ್ರಧಾನ ಮಾಡುವ ವೇಳೆ ಪಂದ್ಯವಾಚಕನಾಗಿ ಮೈದಾನದಲ್ಲಿದ್ದ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ಕಿರಿಯ ಕ್ರಿಕೆಟಿಗರ ತಂಡ ಮಾಡಿದ ಸಾಧನೆಯನ್ನು ಸುನಿಲ್ ಗವಾಸ್ಕರ್ ಮನಸ್ಸಿನಿಂದ ಸಂಭ್ರಮಿಸಿದ್ದಾರೆ.
ಸುನಿಲ್ ಗವಾಸ್ಕರ್ ಡಾನ್ಸ್ ಮಾಡಿದ ರೀತಿ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


