ಬೆಂಗಳೂರು: ನಿನ್ನೆಯಷ್ಟೇ ( ಮಾರ್ಚ್ 9 ) ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಟ್ರೋಫಿಯನ್ನು ಗೆದ್ದಿದೆ.
ಈ ಮೂಲಕ ನ್ಯೂಜಿಲೆಂಡ್ನ ಎರಡನೇ ಚಾಂಪಿಯನ್ಸ್ ಟ್ರೋಫಿ ಕನಸು ಕನಸಾಗಿಯೇ ಉಳಿದುಕೊಂಡಿದೆ. ಒಂದೆಡೆ ನ್ಯೂಜಿಲೆಂಡ್ ಸೋತರೆ ತಂಡದ ಗ್ಲೆನ್ ಫಿಲಿಪ್ಸ್ ಮಾತ್ರ ಅತ್ಯದ್ಭುತ ಕ್ಯಾಚ್ ಪಡೆಯುವ ಮೂಲಕ ನೋಡುಗರನ್ನು ನಿಬ್ಬೆರಗಾಗಿಸಿದರು.
ತನಗಿಂತ ಹಿಂದೆ ಇದ್ದ ಚೆಂಡನ್ನು ಹಕ್ಕಿಯಂತೆ ಹಾರಿ ಹಿಡಿದ ಗ್ಲೆನ್ ಫಿಲಿಪ್ಸ್ ಕಂಡು ಏಲಿಯನ್ ಫಿಲಿಪ್ಸ್ ಎಂದು ಕೊಂಡಾಡುತ್ತಿದ್ದಾರೆ. ಈ ಕ್ಯಾಚ್ ಮಾತ್ರವಲ್ಲದೇ ಟೂರ್ನಿಯಲ್ಲಿ ಈ ರೀತಿಯ ಹಲವಾರು ಕ್ಯಾಚ್ ಪಡೆದಿದ್ದಾರೆ ಫಿಲಿಪ್ಸ್.
ಹೀಗೆ ಕ್ರಿಕೆಟ್ ಅಭಿಮಾನಿಗಳನ್ನು ಅತ್ಯದ್ಭುತ ಫೀಲ್ಡಿಂಗ್ ಮಾಡುವ ಮೂಲಕ ತನ್ನತ್ತ ಸೆಳೆದಿರುವ ಗ್ಲೆನ್ ಫಿಲಿಪ್ಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಶ್ರೇಷ್ಠ ಫೀಲ್ಡರ್ ಎಂಬ ಕಾಮೆಂಟ್ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕ್ರಿಕೆಟ್ನಲ್ಲಿ ಬೆಸ್ಟ್ ಫೀಲ್ಡರ್ ಯಾರು ಎಂದರೆ ಅಪ್ಪಟ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಬರುವ ಹೆಸರು ಜಾಂಟಿ ರೋಡ್ಸ್.
ವಿಶ್ವ ಕ್ರಿಕೆಟ್ನಲ್ಲಿ ಜಾಂಟಿ ರೋಡ್ಸ್ ಬಳಿಕ ಅದೆಷ್ಟೇ ಒಳ್ಳೆಯ ಫೀಲ್ಡರ್ಗಳು ಬಂದರೂ ಯಾರೂ ಸಹ ಅವರನ್ನು ಮೀರಿಸಲಾಗಲಿಲ್ಲ. ಆದರೆ ಗ್ಲೆನ್ ಫಿಲಿಪ್ಸ್ ಅವರ ಫೀಲ್ಡಿಂಗ್ ಈ ಕುರಿತು ಚರ್ಚೆ ಹುಟ್ಟುವ ಮಟ್ಟಕ್ಕೆ ಸದ್ದು ಮಾಡಿದೆ.
ಅದರಂತೆ ನೆಟ್ಟಿಗರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಫೈನಲ್ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಗಿಲ್ ಕ್ಯಾಚ್ ಪಡೆದ ವಿಡಿಯೊ ಹಂಚಿಕೊಂಡು ಗ್ಲೆನ್ ಫಿಲಿಪ್ಸ್ ಕ್ರಿಕೆಟ್ನ ಬೆಸ್ಟ್ ಫೀಲ್ಡರ್ ಎನಿಸುತ್ತದೆ ಬರೆದುಕೊಂಡಿದ್ದಾರೆ. ಅಲ್ಲದೇ ಇದೇ ಟ್ವೀಟ್ನಲ್ಲಿ ಜಾಂಟಿ ರೋಡ್ಸ್ ಅವರನ್ನು ಉಲ್ಲೇಖಿಸಿ ಕ್ಷಮೆ ಇರಲಿ ಎಂದೂ ಸಹ ಬರೆದಿದ್ದಾರೆ.
ಇನ್ನು ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಜಾಂಟಿ ರೋಡ್ಸ್ ಕ್ಷಮೆ ಕೇಳಬೇಡಿ, ನೀವು ಹೇಳಿದ್ದನ್ನು ನಾನೂ ಸಹ ಒಪ್ಪುತ್ತೇನೆ ಎಂದು ಬರೆದುಕೊಂಡಿದ್ದು, ಗ್ಲೆನ್ ಫಿಲಿಪ್ಸ್ ಬೆಸ್ಟ್ ಫೀಲ್ಡರ್ ಎಂಬ ನೆಟ್ಟಿಗನ ಅಭಿಪ್ರಾಯವನ್ನು ಸ್ವಾಗತಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


