Monday, August 31, 2026
spot_img
More
    spot_img
    HomeLatest newsಚಿನ್ನಸ್ವಾಮಿ ಕಾಲ್ತುಳಿತ: RCB ಅಭಿಮಾನಿಗಳು ಹೊಣೆಗಾರರೇ ಅಲ್ಲ; ಒಂದು ಮನೋವೈಜ್ಞಾನಿಕ ವಿಶ್ಲೇಷಣೆ

    ಚಿನ್ನಸ್ವಾಮಿ ಕಾಲ್ತುಳಿತ: RCB ಅಭಿಮಾನಿಗಳು ಹೊಣೆಗಾರರೇ ಅಲ್ಲ; ಒಂದು ಮನೋವೈಜ್ಞಾನಿಕ ವಿಶ್ಲೇಷಣೆ

    ಡಾ. ಎ. ಶ್ರೀಧರ

    Advertisement

    ಆಟವಾಡುವಿಕೆಯು ಪ್ರಕೃತಿ ದತ್ತವಾದ ಸಹಜ ಗುಣ. ಪ್ರತಿಯೊಂದು ಜೀವಿಯಲ್ಲಿಯೂ ಒಂದಿಲ್ಲ ಒಂದು ರೂಪದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣವು ವಯೋಮಾನ, ಕಾಲಮಾನಕ್ಕೆ ಅನುಗುಣವಾಗಿ ಬದಲಾಗುವುದು ಎನ್ನುತ್ತದೆ ಮನೋವಿಜ್ಞಾನ. ಮನುಷ್ಯರಲ್ಲಂತೂ ಮನಸು ಎನ್ನುವ ಸ್ಥಿತಿಯ ವಿಕಸನದಲ್ಲಿ ಆಟ-ಕ್ರೀಡೆಗಳ ಪಾತ್ರ ಆಗಾಧವಾದುದು. ಹುಟ್ಟಿದಾಗಿನಿಂದಲೇ ಕೈಕಾಲುಗಳನ್ನು ಆಡಿಸುವ ಮೂಲಕ ಲವಲವಿಕೆಯನ್ನು ವ್ಯಕ್ತಪಡಿಸುವ ಕಂದಮ್ಮಗಳ ಬಾಲ್ಯದ ಅಭಿವ್ಯಕ್ತಿಯೇ ಪೋಷಕರ ಮನಸಿಗೂ ಹಿತ ತರುವ ಶಕ್ತಿ. ಬಾಲ್ಯದ ಪ್ರಮುಖ ಚಟುವಟಿಕೆಗಳು ಆಟಗಳೇ ಆಗಿರುತ್ತವೆ ಕೂಡ. ಆಟವಾಡಬಲ್ಲ ಈ ಗುಣವೇ ನಂತರದ ವ್ಯವಸ್ಥಿತ ಹೊರಾಂಗಣ, ಒಳಾಂಗಣ ಆಟವಾಗಿ ವೃದ್ಧಿಗೊಳ್ಳುವುದಕ್ಕೆ ಪ್ರೇರೇಪಣೆ.

    ಆದರೆ ಇಂದು ಆಟಕ್ಕಿಂತಲೂ, ಆಟಗಾರರ ಅಬ್ಬರ- ಅಟ್ಟಹಾಸದ ನಡೆನುಡಿಗಳು ಹೆಚ್ಚು ಮೋಹಕವಾಗುತ್ತಿರುವುದು ಗಮನಾರ್ಹ. ಇದಕ್ಕೆ ಬಹುಮುಖ್ಯ ಕಾರಣ ವಿದ್ಯುನ್ಮಾನ ಮಾಧ್ಯಮದ ತಂತ್ರಗಾರಿಕೆ ಮತ್ತು ಸಮೂಹ ಸಂವಹನದ ಬಲ.

    ಜೊತೆಗೆ, ಮನೆಯಾವರಣ, ಗಲ್ಲಿ, ಬೀದಿ, ಮೈದಾನಗಳಲ್ಲಿಯೂ ನಿರಾಯಾಸವಾಗಿ ಆಡಲು ಸಾಧ್ಯವಾಗಿರುವ ಕ್ರಿಕೆಟ್‌ ಎಂಬ ಕ್ರೀಡೆಗೆ ಹೊರಗಿನವರು, ಒಳಗಿನವರು, ಅವರು-ಇವರು, ವಯಸ್ಸು, ಗುಣ ಎನ್ನುವಂತಹ ವರ್ಗೀಕರಣಗಳು ಅಂಟದು. ಕ್ರಿಕೆಟ್ ಬಗೆಗಿನ  ಆಕರ್ಷಣೆಗೆ ಈ ಹುಟ್ಟುಗುಣವೇ ಕಾರಣ. ಇದರಿಂದಾಗಿಯೇ  ಜನ ಮೆಚ್ಚುಗೆ, ಬೆಂಬಲ, ಮನ್ನಣೆ ಸಿಕ್ಕಿರುವುದು. ಎಲ್ಲವು ಹೇರಳವಾಗಿದ್ದಾಗ ಲಾಭದಾಯಕ ಸರಕು ಆಗದಿರಲು ಹೇಗೆ ಸಾಧ್ಯ?

    ಕ್ರಿಕೆಟ್‌ ಪ್ರೇಕ್ಷಕ ಫ್ಯಾನ್‌ ಆಗಿ ಬದಲಾಗುವ ಬಗೆ

    ಈ ಆಟವನ್ನು ವೀಕ್ಷಿಸುವಾಗ  ಪ್ರತಿಯೊಬ್ಬ ಪ್ರೇಕ್ಷಕನು ಸಮರ್ಥ ಆಟಗಾರನಾಗಿ ಭಾವ ಪರವಶತೆಗೆ ಒಳಗಾಗುವುದು ಸಾಮಾನ್ಯ. ಮೈದಾನದಲ್ಲಿರುವ ಆಟಗಾರನ ಭಾವ ತದ್ರೂಪಗಳು ಪ್ರೇಕ್ಷಕ ವರ್ಗದ ಮನದಲ್ಲಿ ಭಟ್ಟಿ ಇಳಿದೇ ಇಳಿಯುತ್ತವೆ. ಆದುದರಿಂದಲೇ ಬಹುದೊಡ್ಡ ಪ್ರೇಕ್ಷಕ ವರ್ಗವು  ತಿಂಗಳುಗಟ್ಟಲೆ ನಡೆಯುವ ಪಂದ್ಯಾವಳಿಗಳಿಗೆ ಮನಸೋತು  ಹಣ, ಸಮಯ ನೀಡಿ ಬೆಂಬಲಿಸುವುದು. ಮಕ್ಕಳು, ಹಿರಿಯರಾದಿಯಾಗಿ ವೀಕ್ಷಿಸಿ ಆನಂದ ಪಡುವ ಈ ಆಟದ ಮೋಹಪರವಶತೆಯೇ ಮಹಾ ಮಾರಕವೂ ಆಗಬಲ್ಲದು ಎನ್ನುವದನ್ನು ಬೆಂಗಳೂರಿನಲ್ಲಿ ಜೂನ್ 4ರಂದು ಸಂಭವಿಸಿದ ಚಿನ್ನಸ್ವಾಮಿ ಕಾಲ್ತುಳಿತ ದುರಂತ ಸ್ಪಷ್ಟಪಡಿಸಿದೆ.

    ಸೋಲು , ಗೆಲವುಗಳನ್ನು ಸಹಜ ರೀತಿಯಲ್ಲಿ ಸ್ವೀಕರಿಸಿ ಆನಂದಿಸುವುದು, ಎಲ್ಲಾ ಆಟಗಳೂ ತಿಳಿಸಿಕೊಡುವ ಬಹುಮುಖ್ಯ  ಪಾಠ. ಯಾವದೇ ರೀತಿಯ ಒತ್ತಡ, ಆಮಿಷಗಳಿರದೇ ಸಹಜವಾಗಿಯೇ ಕ್ರೀಡೆಗಳು ಶಿಸ್ತು, ಸಂಯಮದ ಮನೋಭಾವಗಳನ್ನು ಕ್ರೀಡಾಪಟುಗಳಲ್ಲಿ ಮೂಡಿಸುವಂತೆಯೇ, ಕ್ರೀಡಾಭಿಮಾನಿಗಳಲ್ಲೂ ಮೂಡಿಸುತ್ತವೆ. ಅಗಾಧ ಸಂಖ್ಯೆಯ ಕ್ರೀಡಾಸಕ್ತ ಪ್ರೇಕ್ಷಕ ವರ್ಗ ಆಟವನ್ನು ನೋಡಲು ಒಂದು ಕಡೆ ಸೇರಿದಾಗಲೂ, ಶಿಸ್ತಿನಿಂದ ಕ್ರೀಡೋತ್ಸಾಹದಲ್ಲಿ ಭಾಗವಹಿಸಿ, ಅತಿಭಾವ ಸಂಚಲನಕ್ಕೆ ಒಳಗಾದರೂ, ಸೋಲು ಹತಾಶೆಗಳನ್ನು ಸಹಿಸಿಕೊಂಡೇ ವೀಕ್ಷಿಸುತ್ತಾರೆ. ತಮಗೆ ಇಷ್ಟವಾದ ಆಟಗಾರರ ಏಳುಬೀಳನ್ನು ಸಮಯೋಚಿತ ಭಾವದೊಂದಿಗೆ ಸ್ವೀಕರಿಸುತ್ತಾರೆ. ಕ್ರೀಡಾಸಕ್ತಿ ಎನ್ನುವಂತಹ ಮನದ ಸ್ಥಿತಿಯೇ ಈ ನಮೂನೆಯ ಮಾನವೀಯ ಸಂಯಮಕ್ಕೆ ಪ್ರೇರಣೆ.

    ಆದರೆ ಇಂತಹದೊಂದು ಸಂಯಮ ಶೀಲತೆಯ ಮೇಲೆ ಯಶಸ್ವಿಯಾಗಿ ಲಗ್ಗೆ ಇಟ್ಟಿರುವುದು ನವೀನ ತಂತ್ರಜ್ಞಾನದ ಸಂವಹನದ ಸೌಲಭ್ಯಗಳು ಮತ್ತು ಜಾಗತಿಕ ಬಂಡವಾಳದ ಶಕ್ತಿಗಳು. ಹೀಗಾಗಿ ಕ್ರಿಕೆಟಿನಂತಹ ಸಾಂಪ್ರದಾಯಿಕ ಆಟದ ನೆಲೆ, ನಿಯಮ, ಸ್ವರೂಪಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದು ಬಂಡವಾಳದ  ವ್ಯವಸ್ಥೆ. ವೀಕ್ಷಕನಲ್ಲಿ ತಕ್ಷಣದ ರೋಚಕತೆ ಏರುವಂತೆ ಮಾಡುವ  ಮನೋವೈಜ್ಞಾನಿಕ ತಂತ್ರಗಳನ್ನು ಅಳವಡಿಸಿಕೊಂಡು  ಉತ್ಸಾಹದೊಂದಿಗೆ ಉನ್ಮಾದ(ಮೆನಿಯ)ದ ಮನಸ್ಥಿತಿಯನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ಇಂದಿನ ನವೀನ ಸ್ವರೂಪದ ತಂತ್ರಜ್ಞಾನಕ್ಕಿದೆ. ಇಂತಹ ಶಕ್ತಿಗಳ ಒಳಸಂಚಿಗೆ ಹೆಚ್ಚಾಗಿ ತುತ್ತಾಗುತ್ತಿರುವುದು ಹೊಸ ಪೀಳಿಗೆಯ ಯುವಜನ. ಸುಲಭವಾಗಿ ಲಭ್ಯವಾಗುತ್ತಿರುವ ವಿದ್ಯುನ್ಮಾನದ ಯಂತ್ರ ಮತ್ತು ತಂತ್ರಾಂಶಗಳ ಬಗ್ಗೆ ಉತ್ತಮ ಅರಿವೂ ಇವರಲ್ಲಿ ಬಹುತೇಕರಿಗೆ ಇದೆ. ಹೀಗಾಗಿ, ಇವೆಲ್ಲದರ ನಡುವೆಯೂ ತಂತ್ರಗಾರಿಕೆಯ ಹಿಡಿತಗಳಿಗೆ ಸಿಕ್ಕಿಕೊಳ್ಳದೇ ಕ್ರಿಕೆಟ್ ಆಟವನ್ನು ಮೆಚ್ಚಿಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಈ ನಮೂನೆಯ ಕಟ್ಟಾ  ಕ್ರೀಡಾಭಿಮಾನಿಗಳಿರುವುದರಿಂದಲೇ ಕ್ರಿಕೆಟ್ ಆಟದ ಸೊಬಗು ಮಾಸಲು ಸಾಧ್ಯವಾಗುತ್ತಿಲ್ಲ.

    ಕ್ಷಣದಲ್ಲಿ ಕಲಾವಿದರಾಗುತ್ತಿರುವ ಕ್ರೀಡಾಪಟುಗಳು

    ಆಟಕ್ಕೆ ತಕ್ಕ ಕೌಶಲ್ಯಗಳು ಇರುವಂತಹ  ಕ್ರೀಡಾಪಟುಗಳಿಂದು ಮನರಂಜನೆ ನೀಡುವ ಹೊಸ ನಮೂನೆಯ ಕಲಾವಿದರಾಗುತ್ತಿದ್ದಾರೆ. ಹೀಗಾದಾಗ ಕ್ರಿಕೆಟಿಗರ ಆಟದ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ ಅವರನ್ನು ಮೆಚ್ಚುವಂತಹ ಪರಿಸರವಿಂದು ನಿರ್ಮಾಣಗೊಂಡಿದೆ. ಆಟದ ಮೇಲಿನ ಹುಮ್ಮಸ್ಸಿಗಿಂತಲೂ, ಸರಣಿ ಪಂದ್ಯಗಳನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವೀಕ್ಷಿಸಿ ಆನಂದಿಸುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದರ ಪರಿಣಾಮಗಳು ನಾಗರೀಕ ನೆಮ್ಮದಿಗೂ ಮಾರಕವೆನ್ನವುದನ್ನು ಕಳೆದವಾರ ಬೆಂಗಳೂರಿನಲ್ಲಿ ನಡೆದ ‘ವಿಜಯೋತ್ಸವ’ವು ತೋರಿಸಿಕೊಟ್ಟಿದೆ. 

    ಸದಾ ಪೈಪೋಟಿ, ಚಂಚಲ ಮನದ ಸ್ಥಿತಿಯನ್ನು ಸೃಷ್ಟಿಸುವ ಮೂಲಕ ಎಲ್ಲರ ಚಲನವಲನಗಳನ್ನೂ ಕೂಡ ಮಾರಾಟದ ಸರಕನ್ನಾಗಿಸುತ್ತದೆ ಹಣದ ಬಲ ಮೇಲೆ ನಿಂತಿರುವ ಇವತ್ತಿನ ವ್ಯವಸ್ಥೆ. ಕ್ರೀಡಾ ಕೌಶಲ್ಯಗಳನ್ನು ಹೆಚ್ಚಿಸುವುದು, ನಿಯಂತ್ರಿಸುವುದು ಮತ್ತು ಅವುಗಳ ಮೇಲೆ  ಹದ್ದಿನ ಕಣ್ಣಿರಿಸುವಿಕೆಯಲ್ಲಿಯೇ ಆಳವಾಗಿ ಬೇರೂರಿದೆ ಜಾಗತಿಕ ಬಂಡವಾಳದ ವ್ಯವಸ್ಥೆ. ಅಧಿಕ ಕೌಶಲ್ಯವಿರುವ ಕ್ರೀಡಾಪಟುಗಳ ಮನಸ್ಸು ಕ್ಷಿಪ್ರವಾಗಿ ಇವರ ಕಡೆ ವಾಲಿಸಿಕೊಂಡಿರುವ ಪ್ರಕ್ರಿಯೆ ಹಿಂದಿರುವುದು ಹಣ ಮಾತ್ರವೇ. ತಿಂಗಳುಗಟ್ಟಲೆ ನಡೆಯುವ ಪಂದ್ಯಾವಳಿಗಳಲ್ಲಿ ಇವರುಗಳ ಸ್ವಾರಸ್ಯಕರ ಅಭಿನಯ ದೃಶ್ಯಗಳು ಜಾಹಿರಾತಿನ ಮೂಲಕ ಕೊಳ್ಳುಬಾಕತನದ ಮನೋಬಲವನ್ನು ಹೆಚ್ಚಿಸಲಾಗುತ್ತದೆ. ಪ್ರತಿ ಸರಣಿಗೂ ಸೇರ್ಪಡೆಯಾಗುವ ಹೊಸ ಪೀಳಿಗೆಯ ಪ್ರೇಕ್ಷಕ ವರ್ಗದ ಮನಸಿನಲ್ಲಿ ಕುತೂಹಲ, ಉತ್ಸಾಹ ಮತ್ತು ಅದೆಷ್ಟೋ ಸಲ ಭಾವೋದ್ರೇಕವನ್ನು ಸಾಮಾನ್ಯ ನಡೆನುಡಿಯೆನ್ನುವಂತೆ ಈ ಕ್ರೀಡಾ ಪ್ರಕ್ರಿಯೆಗಳು ಬಿಂಬಿಸಿಬಿಡುತ್ತವೆ. ಇದಕ್ಕೆ ತಕ್ಕಂತೆ ಮಾಧ್ಯಮಗಳ ಮೂಲಕದ ಚರ್ಚೆ, ವಿಚಾರವಿನಿಮಯದ  ವರಸೆ, ರಭಸ  ಮತ್ತು  ಪದೇಪದೇ ಬರುವ  ಆಟದ  ದೃಶ್ಯವಾಳಿಗಳು ವೀಕ್ಷಕರ ಮುಜುಗರವನ್ನು ಹತ್ತಿಕ್ಕಿ ಟಿವಿ, ಮೊಬೈಲು ಕಂಪ್ಯೂಟರಿನ ತೆರೆಯನ್ನು ವಶಪಡಿಸಿಕೊಂಡು, ಅದರಿಂದ ಹೊರಬರಲು ಪ್ರಯತ್ನಿಸುವ ಪ್ರತಿರೋಧಗಳನ್ನು ಮುಲಾಜಿಲ್ಲದೆಯೇ ಬದಿಗಿರಿಸಿ ಬಿಡುತ್ತವೆ.

    ಮನಸಿನೊಳಗೆ ಆಳವಾಗಿ ಸುಳಿಯಬಲ್ಲ ಈ ಕ್ರಿಯೆಯು ಸದಾ ಕುತೂಹಲ, ತವಕದ ಸ್ಥಿತಿಯನ್ನು ಉಂಟುಮಾಡಿದತ್ತದೆ. ಪರಿಣಾಮ ಸರಣಿಯ ಆಟದ ಕೊನೆಯ ಫಲಿತಾಂಶದ ಮೇಲೆ ಆಗುವದೇ ಹೆಚ್ಚು. ತಾವು ಮೆಚ್ಚಿಕೊಂಡ ತಂಡವು ಜಯಶಾಲಿ ಆದರಂತೂ ಸಂಭ್ರಮದ ಮನಸ್ಥಿತಿಯು ತಡೆಯಲಾಗದಂತಹ  ಉತ್ಸಾಹ, ಉಲ್ಲಾಸದ ಸ್ಥಿತಿಗೆ ಏರಿಬಿಟ್ಟಿರುತ್ತದೆ. ಎಷ್ಟರಮಟ್ಟಿಗೆ ಅಂದರೆ, ಗೆದ್ದ ಪಂಗಡದವರು ಈ ನೆಲದ ಸೊಬಗು, ಸೊಗಡನ್ನು ಅರಿಯದವರಾಗಿದ್ದರೂ  ಅವರ ಸಾಮರ್ಥ್ಯ, ಸಾಧನೆಗಳನ್ನು ಮೆಚ್ಚಿಕೊಳ್ಳುವ  ಔದಾರ್ಯವು ವಿಶೇಷವಾಗಿ ಕನ್ನಡಿಗರಲ್ಲೆದ್ದು ಕಾಣುವ ಹುಟ್ಟುಗುಣ. ‘ತಮ್ಮವರ ಗೆಲವು’  ತರುವ ಅಮಿತೋತ್ಸಾಹವು  ಒಂದೇ ಒಂದು ಪಂದ್ಯದ ಗೆಲವಿನಿಂದ ಹುಟ್ಟಿದುದಲ್ಲ. ವಾರಾನುವಾರಗಟ್ಟಲೆ ನಡೆದ ಪಂದ್ಯಾವಳಿಗಳು ಸೃಷ್ಟಿಸಿದ್ದ  ಮಾನಸಿಕ ಸ್ಥಿತಿ.  ಗೆದ್ದ ಆಟಗಾರರು ನಮ್ಮವರು,  ಟೀಂ ನಮ್ಮೂರಿನವರದ್ದು ಎನ್ನುವಂತಹ ಭಾವನೆಗಳು ಪರಿಸ್ಥಿತಿಯನ್ನು ಮತ್ತಷ್ಟು ಭಾವಪೂರ್ಣವಾಗಿಸಿಬಿಡುತ್ತದೆ. ಅಷ್ಟೇ ಅಲ್ಲ ಸಾಮಾನ್ಯವಾಗಿ ಮನುಷ್ಯರಲ್ಲಿರುವ ಹೊಸ ಅಪರಿಚಿತ ಸನ್ನಿವೇಶದ ಬಗ್ಗೆ ಎದ್ದೇಳುವ  ಸಂದೇಹ, ಎಚ್ಚರಗಳು ಇಂತಹ ಸಮಯದಲ್ಲಿ ಮನಸಿಗೆ ಆಗ ಬಾರದು. ತಮ್ಮ ನೆಚ್ಚಿನ ತಂಡವನ್ನು ಸ್ವಾಗತಿಸುವ ಸಂಭ್ರಮವೊಂದೇ ಪ್ರತಿಯೊಬ್ಬ ಅಭಿಮಾನಿಯ ಮನಸ್ಸು ಮಾಂಸಖಂಡಗಳಲ್ಲಿ ತುಂಬಿಬಿಟ್ಟಿರುತ್ತದೆ. ಅದೇ ಮಿಕ್ಕೆಲ್ಲಾ ಎಚ್ಚರಿಕೆಯ ಭಾವ, ವಿವೇಚನೆಗೆ ದಿಢೀರ್ ಬ್ರೇಕ್ ಹಾಕುತ್ತದೆ. ಇದರಿಂದ ಪ್ರೇಕ್ಷಕ ಹಳಿ ತಪ್ಪಿದವನಾಗಿ/ಳಾಗಿ, ಅಪಾಯಕಾರಿ ಫ್ಯಾನ್‌ ಮನಸ್ಥಿತಿ ಬೆಳೆಯುತ್ತದೆ.

    ಕಾಲ್ತುಳಿತ ದುರಂತಕ್ಕೆ ಹೊಣೆಗಾರರು ಯಾರು?

    ಸಾರ್ವಜನಿಕರು ಭಾಗಿಯಾಗುವ ಪ್ರತಿಯೊಂದು ದೊಡ್ಡ ಸಂಭ್ರಮಗಳಲ್ಲಿಯೂ  ಭಾವೋದ್ರೇಕ ಮತ್ತು ಉನ್ಮಾದಕ್ಕೆ ತಕ್ಷಣದಲ್ಲಿ ಒಳಗಾಗುವ ಮನಸ್ಸು ಇದ್ದೇ ಇರುತ್ತದೆ. ಧಾರ್ಮಿಕ, ಹೊಸನಮೂನೆಯ ಸಂಗೀತ ಮತ್ತು ಆಯ್ದ ಜನಪ್ರಿಯ ಕ್ರೀಡೆಗಳಲ್ಲಿ ಈ ಆವೇಗದ ಸ್ವರೂಪ ಬಹು ತೀವ್ರ. ಉತ್ಸವ, ವಿಜಯೋತ್ಸಾವ ಮತ್ತು ಆಚರಣೆಗಳಲ್ಲಿ ಕಟ್ಟೆ ಒಡೆದು ಹರಿಯುವುದು ಸಾಮಾನ್ಯ. ಇಂತಹದೊಂದು ಉತ್ಸಾಹ, ಭಾವೋದ್ರೇಕದ  ಸ್ಥಿತಿಯಲ್ಲಿರುವವರು ಸರಕಾರ, ಆಯೋಜಕರು ಮತ್ತು ಸಂವಹನ ಮಾಧ್ಯಮಗಳನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡಿರುತ್ತಾರೆ. ಸರಕಾರ, ಆಡಳಿತದ ಯಂತ್ರ ಮತ್ತು ವ್ಯವಸ್ಥಾಪಕರು ಇದನ್ನು ಉಳಿಸಿಕೊಳ್ಳದಿದ್ದರೆ ದುರಂತಗಳು ಸಂಭವಿಸುವುದು ಖಂಡಿತ.

    ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವವರ ಮನಸ್ಥಿತಿಯೂ ಇಂತಹ ದುರಂತಗಳಿಗೆ ಕಾರಣವಿರಬಹುದೇ ಎನ್ನುವ ಪ್ರಶ್ನೆಯನ್ನು ಅಗತ್ಯಕ್ಕಿಂತ ಹೆಚ್ಚೇ ಕೇಳಲಾಗಿದೆ. ಜಾತ್ರೆ, ಉತ್ಸವ, ಕ್ರೀಡೆ ಮತ್ತು ಮೆರವಣಿಗೆಗಳಲ್ಲಿ ನೈಜವಾದ ಉದ್ದೇಶದಿಂದ ಭಾಗವಹಿಸುವವರೊಂದಿಗೆ ಯಾವುದೇ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರದವರು ಸೇರಿರುತ್ತಾರೆ. ಇವರುಗಳು ಸುಲಭವಾಗಿ ಉದ್ರೇಕಕ್ಕೆ ಒಳಗಾಗುವುದು ಸಾಮಾನ್ಯ. ಅತಿ ಅವಸರ, ಆವೇಶ, ಆಕ್ರೋಶ ಮೊದಲು ಕಾಣಿಸಿಕೊಳ್ಳುವದು ಇಂತಹ ಮನಸ್ಥಿತಿಗಳಲ್ಲಿ ಹೆಚ್ಚು. ಅದರಲ್ಲಿಯೂ  ಯುವಜನರು, ಕಿರಿಯರೇ ಹೆಚ್ಚಾಗಿ ಸೇರುವ ಸಮಾರಂಭಗಳಲ್ಲಿ ಶಾರೀರಿಕ, ಮಾನಸಿಕ ಶಕ್ತಿಗಳೆರಡು ಅಗಾಧವಾಗಿರುತ್ತವೆ.ಅಪಾರ ಮೆಚ್ಚುಗೆ ಮನ್ನಣೆ ಪಡೆದ ಜನಪ್ರಿಯ ಸಂಗೀತ, ಕ್ರಿಕೆಟ್‌ಗೆ ಸಂಬಂಧಿಸಿದ ಸಂಭ್ರಮಗಳು ಜನೋದ್ರಿಕ್ತತೆಯನ್ನು ಹಿಡಿತಕ್ಕೆ ಬಾರದಷ್ಟು ರೀತಿಯಲ್ಲಿ ವೇಗವಾಗಿ ಹರಡುತ್ತವೆ.

    ಇದನ್ನು ತಮ್ಮದೇ ದೃಷ್ಟಿಯಿಂದ ನೋಡುವ ಕೆಲ ಮನೋವಿಜ್ಞಾನಿಗಳು, “ಕಾಲ್ತುಳಿತ (ಸ್ಟ್ಯಾಂಪೀಡ್) ಎನ್ನುವ ಪದವು ಮೂಕ ಪ್ರಾಣಿಗಳ ಗುಂಪು ವರ್ತನೆಯ ಪ್ರತೀಕವಾಗಿರುವದರಿಂದ, ಮನುಷ್ಯರಿಗೆ ಅನ್ವಯಿಸುವುದು ತರವಲ್ಲ” ಎನ್ನುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ  ಧಾರ್ಮಿಕ, ಸಾಮಾಜಿಕ, ಮನರಂಜನೆ, ಕ್ರೀಡೆಯ ಭವ್ಯ ಸಂಭ್ರಮಾಚರಣೆಯಲ್ಲಿ ಅಪಾರ ಸಾವು/ನೋವುಗಳಾಗುತ್ತಿರುವುದರ ಕಾರಣಗಳಲ್ಲಿ ಭಾಗವಹಿಸುವವರ ಮಾನಸಿಕತೆ ಪ್ರಮುಖ ಕಾರಣವಲ್ಲವೆನ್ನುವದು ಎದ್ದು ಕಾಣಿಸುತ್ತದೆ. ಈ ಸಂಗತಿಯನ್ನು ಸಾಮಾಜಿಕ ಮನೋವೈಜ್ಞಾನಿಕ ಅಧ್ಯಯನಗಳು ಸಹ ಸೂಚಿಸುತ್ತವೆ. ಅಪಾರ ಸಂಖ್ಯೆಯಲ್ಲಿ ಜನ  ಭಾಗಿಯಾಗುವ ಕಾರ್ಯಕ್ರಮಗಳನ್ನು ನಿಯಂತ್ರಿಸುವ, ನಿರ್ವಹಿಸುವ ಬಲ ಸರಕಾರ, ಸಾರ್ವಜನಿಕ  ನಿರ್ವಹಣಾ ವ್ಯವಸ್ಥೆಗಳಲ್ಲಿ  ಇರಬೇಕಾಗುತ್ತದೆ, ಇರುತ್ತದೆ. ಇದನ್ನು ಸಮಯೋಚಿತವಾಗಿ ಬಳಸದಿದ್ದಾಗ ಅವಘಡವಾಗದಿರಲು ಹೇಗೆ ಸಾಧ್ಯ?

    ಕಾಲ್ತುಳಿತ (ಸ್ಟ್ಯಾಂಪೀಡ್) ಎನ್ನುವ ಪದವು ಮೂಕ ಪ್ರಾಣಿಗಳ ಗುಂಪು ವರ್ತನೆಯ ಪ್ರತೀಕವಾಗಿರುವದರಿಂದ, ಮನುಷ್ಯರಿಗೆ ಅನ್ವಯಿಸುವುದು ತರವಲ್ಲ.”

    ಜನಸಾಗರದ ನಿರ್ವಹಣೆಯನ್ನು ಮಾಡಬೇಕಾದವ್ರ ಹೊಣೆಗೇಡಿತನ ಮತ್ತು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವವರ ತರಾತುರಿಯ ಸಿದ್ಧತೆಗಳು ಪ್ರಮುಖ ಕಾರಣವೆನ್ನುವದನ್ನು ಸಾಮಾಜಿಕ ಮನೋವಿಜ್ಞಾನದ ಅಧ್ಯಯನಗಳು ತಿಳಿಸಿಕೊಡುತ್ತವೆ. ದೊಡ್ಡ ದೊಡ್ಡ ಸಾರ್ವಜನಿಕ ಸಮಾರಂಭಗಳನ್ನು ನಿರ್ವಹಿಸಲು ಅಗತ್ಯವಾದ ಯೋಜನೆ, ಕಾರ್ಯಪಡೆಯನ್ನು ಅಲ್ಪಾವಧಿಯಲ್ಲೂ ಸಿದ್ಧಪಡಿಸಬಲ್ಲ ಕಾರ್ಯಸಾಮರ್ಥ್ಯವಿರುವ ತಜ್ಞರು ಇದ್ದಾರೆ. ಅವರ ಸಲಹೆಗಳನ್ನು ಕಡೆಗಣಿಸುವ ನಾಯಕರ ಅಹಂ ಪ್ರತಿಷ್ಠೆ, ಪ್ರಾಬಲ್ಯಗಳು ಸದಾ ಇಂತಹ ಸನ್ನಿವೇಶಗಳಲ್ಲಿ  ಮೇಲ್ಗೈ ಪಡೆದಿರುತ್ತವೆ.

    ಜನೋತ್ಸಾಹದ ಕಾರ್ಯಕ್ರಮಗಳನ್ನು ತಕ್ಷಣದಲ್ಲಿ ಆಯೋಜಿಸುವುದು ಅಪಾಯಕಾರಿ ಎನ್ನುವ ಮುನ್ನೆಚ್ಚರಿಕೆಯನ್ನು ಸದಾ ಪಾಲಿಸುವ ಮನಸ್ಥಿತಿಯು ಸರಕಾರ ಮತ್ತು ರಾಜಕಾರಣಿಗಳಲ್ಲಿ ಜಾಗೃತವಾಗಿರಲೇ ಬೇಕು. ಅಂತೆಯೇ ಜನಸಾಮಾನ್ಯರೂ ಕೂಡ ಫ್ರೀ ಪಾಸ್ ಇತ್ಯಾದಿ ಆಹ್ವಾನಗಳ ಬಗ್ಗೆ ಎಚ್ಚರ ವಹಿಸುವುದು ಬಹುಮುಖ್ಯ. ಸರ್ಕಾರದ ಸಾಮರ್ಥ್ಯಗಳ ಬಗ್ಗೆ ಕೊಂಚ ಸಂದೇಹ ಇರಿಸಿಕೊಳ್ಳುವುದು ನಾಗರೀಕರ ಹಕ್ಕೂ ಕೂಡ. ಚಿಕ್ಕದೊಂದು ಎಚ್ಚರಿಕೆಯಿಂದ ಇಂತಹ ದುರಂತಗಳು ನಡೆದಾಗ ಭಾಗವಹಿಸಿದವರ ದೇಹ, ಮನಸಿಗೆ ಆಗುವ ಆಘಾತಗಳು ಕಡಿಮೆ ಆಗುತ್ತವೆ.

    ಬಹುಮುಖ್ಯವಾಗಿ, ಕಠರ್ ಕ್ರೀಡಾಭಿಮಾನಿಗಳು ಸಮಾಜಮುಖಿಯಾಗಿ ಬದಲಾಗುವ ಸಾಧ್ಯತೆಗಳನ್ನು ಈಗಾಗಲೇ ಸಾಕಷ್ಟು ದೇಶಗಳಲ್ಲಿ ನೋಡಿದ್ದೇವೆ. ಅಮೆರಿಕಾದಲ್ಲಿ ಬೇಸ್‌ಬಾಲ್‌ ಅಭಿಮಾನಿಗಳು ಜನಪರ ಕೆಲಸಗಳ ಮೂಲಕ ಮುಖ್ಯವಾಹಿನಿಗೆ ಬಂದಿದ್ದು, ಬ್ರೆಸಿಲ್‌ನಲ್ಲಿ ಫೂಟ್ಬಾಲ್‌ ಅಭಿಮಾನಿಗಳು ಪ್ರಜಾಪ್ರಭುತ್ವ ಉಳಿಸಲು ಶಾಂತಿಯುತ ಸತ್ಯಾಗ್ರಹಗಳಿಗೆ ಇಳಿದಿದ್ದು ಹೀಗೆ ಸಾಕಷ್ಟು ಉದಾಹರಣೆಗಳಿವೆ. ಇಲ್ಲಿಯೂ ಆರ್‍‌ಸಿಬಿ ಅಭಿಮಾನಿಗಳು ನಾಗರೀಕ ಸಮಾಜ ಸಮಸ್ಯೆಗಳಿಗೆ ದನಿಯಾಗುವ ಮೂಲಕ ಸಾಮಾಜಿಕ ಮನ್ನಣೆ ಗಳಿಸಬೇಕಿದೆ. ಹಾಗೂ, ತಮ್ಮ ಸಾಮೂಹಿಕ ಶಕ್ತಿಯ ಸದ್ಬಳಕೆಗೆ ಹೊಸ ದಾರಿಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.  

    (ಲೇಖಕರು ಖ್ಯಾತ ಮನೋವಿಜ್ಞಾನಿಗಳು. ಯಾವುದೇ ರೀತಿಯ ಮಾನಸಿಕ ಸಲಹೆಗಳಿಗೆ sridharapsychologist@gmail.com ಸಂಪರ್ಕಿಸಬಹುದು)


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading