ಈ ತಿಂಗಳು ಮುಗಿದರೆ 2025 ವರ್ಷದ ಮೊದಲಾರ್ಧ ಮುಕ್ತಾಯಗೊಳ್ಳಲಿದ್ದು, ಇನ್ನೇನು ಅರ್ಧ ವರ್ಷದ ಸಿನಿಮಾ ರಿಪೋರ್ಟ್‌ಗಳು ಹರಿದಾಡಲಿವೆ. ಆದರೆ ಕನ್ನಡ ಚಿತ್ರರಂಗದ ರಿಪೋರ್ಟ್ ಮಾಡುವ ಅಗತ್ಯವೇ ಇಲ್ಲವೇನೋ ಎಂಬ ದುಸ್ಥಿತಿ ಬಂದೊದಗಿದೆ. ಕಾರಣ ಈ ವರ್ಷ ಇಲ್ಲಿಯವರೆಗೂ ಒಂದೇ ಒಂದು ಹಿಟ್ ಚಿತ್ರ ಇಲ್ಲದೇ ಇರುವುದು.
ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಸುದೀಪ್ ನಟನೆಯ ಮ್ಯಾಕ್ಸ್ ಗೆದ್ದಿದ್ದು ಬಿಟ್ಟರೆ ನಂತರ ಬಿಡುಗಡೆಯಾದ ಇನ್ಯಾವ ಕನ್ನಡ ಚಿತ್ರವೂ ಸಹ ಗೆಲ್ಲಲಿಲ್ಲ. ಈ ವರ್ಷ ನೋಡಿದವರು ಏನಂತಾರೆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು ಬಿಟ್ಟರೆ ಇನ್ಯಾವ ಸಿನಿಮಾ ಬಗ್ಗೆನೂ ಚರ್ಚೆಯಾಗಲೇ ಇಲ್ಲ.
ಇದೇ ವಿಷಯವನ್ನು ಕರ್ನಾಟಕ ಟಾಕೀಸ್ ಎಂಬ ಎಕ್ಸ್ ಖಾತೆ ಟ್ವೀಟ್ ಮಾಡಿದ್ದು, ಎರಡಂಕಿ ಕೋಟಿ ಗಳಿಸುವ ಸಾಧನೆಯನ್ನು ಯಾವ ಚಿತ್ರವೂ ಮಾಡಿಲ್ಲ, ಇದರಿಂದ ಸಿಂಗಲ್ ಸ್ಕ್ರೀನ್‌ಗಳಿಗೆ ತೊಂದರೆಯಾಗುವುದು ಪಕ್ಕಾ. ಇದರಿಂದ ಕನ್ನಡ ಚಿತ್ರರಂಗ ಭಾರೀ ಹಿನ್ನಡೆ ಅನುಭವಿಸಿದೆ ಎಂದು ಬರೆದುಕೊಂಡಿದೆ.
ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ನಟ ದಿಗಂತ್ ಮಂಚಾಲೆ ʼಕನ್ನಡ ಚಿತ್ರರಂಗಕ್ಕಿದು ನಿಧಾನಗತಿಯ ವರ್ಷ ಎಂಬುದು ನಮಗೆ ತಿಳಿದಿದೆ. ಆದರೆ ಕೆಲವೊಮ್ಮೆ ಒಂದು ಕಥೆ ಇಡೀ ದಿಕ್ಕನ್ನು ಬದಲಿಸಲಿದೆ. ಇದೇ 13ಕ್ಕೆ ಎಡಗೈ ಅಪಘಾತಕ್ಕೆ ಕಾರಣ ಬಿಡುಗಡೆಯಾಗುತ್ತಿದ್ದು, ಇದು ನಿಷ್ಠೆ, ಭಾವನೆಗಳು ಹಾಗೂ ಪ್ರೀತಿಯ ಅಂಶಗಳನ್ನು ಹೊಂದಿದೆ. ಮಾಸ್ ಸಿನಿಮಾ ಅಲ್ಲದೇ ಇರಬಹುದು. ಆದರೆ ಇದಕ್ಕೆ ಹೃದಯವಿದೆ, ಅಷ್ಟು ಸಾಕು. ನಮಗೆ ಒಂದೊಳ್ಳೆ ಕಥೆ ಇರುವ ಚಿತ್ರದ ಮೇಲೆ ನಂಬಿಕೆ ಇದೆʼ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


