ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಇದೀಗ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ನಡೆದ ಗುಂಡಿನ ದಾಳಿಯ ಬಳಿಕ ಪೊಲೀಸರು ಆ ಪ್ರದೇಶದಲ್ಲಿ ಸೆವೆಂತ್ ಅವೆನ್ಯೂ ಮತ್ತು ಬ್ರಾಡ್‌ವೇಯ ಕೆಲವು ಭಾಗಗಳನ್ನು ಮುಚ್ಚಿದ್ದಾರೆ.
ಶನಿವಾರ ಸ್ಥಳೀಯ ಕಾಲಮಾನ ಬೆಳಗಿನ ಜಾವ 1:20 ರ ಸುಮಾರಿಗೆ ಘಟನೆ ನಡೆದಿದೆ. ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ವೆಸ್ಟ್ 44 ನೇ ಬೀದಿ ಮತ್ತು ಸೆವೆಂತ್ ಅವೆನ್ಯೂದಲ್ಲಿ ಘಟನೆ ನಡೆದಿದೆ.
ಗುಂಡಿನ ದಾಳಿ ನಡೆಸಿರುವ ಘಟನೆ ಸಂಬಂಧ ಒಬ್ಬ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡ ವ್ಯಕ್ತಿಗಳಲ್ಲಿ ಒಬ್ಬ 19 ವರ್ಷದ ಯುವಕ, 65 ವರ್ಷದ ವ್ಯಕ್ತಿ ಹಾಗೂ 18 ವರ್ಷದ ಯುವತಿ ಸೇರಿದ್ದಾರೆ. ಗಾಯಾಳುಗಳನ್ನು ತಕ್ಷಣ ಬೆಲ್ಲೆವ್ಯೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಯಾರ್ಕ್ ನಗರ ಅದರಲ್ಲೂ ವಿಶೇಷವಾಗಿ ಟೈಮ್ಸ್ ಸ್ಕ್ವೇರ್ ಮತ್ತು ಸಬ್‌ವೇ ನಿಲ್ದಾಣಗಳಂತಹ ಸ್ಥಳಗಳಲ್ಲಿ ಹೆಚ್ಚಿನ ಜನದಟ್ಟಣೆ ಸಾಮಾನ್ಯವಾಗಿಯೇ ಇರುತ್ತದೆ. ಇಲ್ಲಿ ಇಂತಹ ದಾಳಿಗಳು ಸಾಮಾನ್ಯ ಹಾಗೂ ನಿರ್ಣಾಯಕ ಎನಿಸಿದೆ.
ಕಳೆದ ತಿಂಗಳ ಕೊನೆಯಲ್ಲಿ, ಪಾರ್ಕ್ ಅವೆನ್ಯೂದಲ್ಲಿನ ಕಚೇರಿ ಕಟ್ಟಡದಲ್ಲಿ ಒಬ್ಬ ಬಂದೂಕುಧಾರಿ ಕರ್ತವ್ಯದಲ್ಲಿಲ್ಲದ ನ್ಯೂಯಾರ್ಕ್ ನಗರದ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರನ್ನು ಕೊಂದು, ನಂತರ ಸ್ವತಃ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಘಟನೆ ಸ್ಥಳೀಯರನ್ನು ಆಘಾತಕ್ಕೊಳಗಾಗುವಂತೆ ಮಾಡಿತ್ತು. ಈಗ ಮತ್ತೆ ಗುಂಡಿನ ದಾಳಿ ನಡೆದಿದೆ.
,ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿಯ ಭೀಕರ ಕೊಲೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


