ಕಳೆದೆರಡು ದಿನಗಳಿಂದ ನೇಪಾಳದ ಸ್ಥಿತಿ ತೀರ ಹದಗೆಟ್ಟಿದೆ. ಹೊರಗಿನವರ ಪ್ರಕಾರ ಪರಿಸ್ಥಿತಿ ಹದಗೆಟ್ಟಿದೆಯಾದರೂ ಅಲ್ಲಿನ ಜನರ ಪ್ರಕಾರ ನೇಪಾಳ ಈಗ ಹದಗೆಟ್ಟ ಸ್ಥಿತಿಯಿಂದ ಮೈಕೊಡವಿಕೊಂಡು ಸುಧಾರಣೆಯತ್ತ ಹೆಜ್ಜೆ ಇಟ್ಟಿದೆ ಎನ್ನುತ್ತಾರೆ. ಕಠ್ಮಂಡು ತುಂಬಾ ಸಾರ್ವಜನಿಕರು ರಸ್ತೆಗಿಳಿದಿದ್ದು, ಪಕ್ಷ ನೋಡದೇ ಸಿಕ್ಕ ರಾಜಕಾರಣಿಗಳನ್ನು ಮನಸೋ ಇಚ್ಛೆ ಥಳಿಸಿ ತಮ್ಮಲ್ಲಿನ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನ ಮಂತ್ರಿಯನ್ನೂ ಲೆಕ್ಕಿಸದೇ ಅವರ ಮನೆಯನ್ನೇ ಸುಟ್ಟುಹಾಕಿದ್ದಾರೆ. ಇನ್ನು ತಮ್ಮಿಂದಲೇ ಚುನಾಯಿತಗೊಂಡು ಮಂತ್ರಿ ಎಂದು ಕರೆಸಿಕೊಂಡಿದ್ದವರನ್ನು ಹಿಗ್ಗಾಮುಗ್ಗ ಜಾಡಿಸಿ ಜನರು ನದಿಗೆ ಎಸೆದ ಘಟನೆಗಳೂ ಸಹ ನಡೆದಿವೆ.
ನೇಪಾಳದ ಜನರು, ಅದರಲ್ಲೂ ಜೆನ್ ಝೀ ಎಂದು ಕರೆಸಿಕೊಳ್ಳುವ ಯುವ ಜನತೆ ಈ ಮಟ್ಟಿಗೆ ರೊಚ್ಚಿಗೇಳಲು ಆನ್‌ಲೈನ್ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿದ್ದು ಹಾಗೂ ನಿರುದ್ಯೋಗ ಕಾರಣಗಳು ಎಂದು ತಿಳಿದುಬಂದಿದೆಯಾದರೂ ಜನರು ಒಮ್ಮೆಲೆ ಭ್ರಷ್ಟಾಚಾರದ ವಿರುದ್ಧ ಇಷ್ಟು ದೊಡ್ಡ ಮಟ್ಟದಲ್ಲಿ ದನಿ ಎತ್ತಲು ಪ್ರೇರಿಪಿತವಾದದ್ದು ಆ ಒಂದು ರೀಲ್.
ಹೌದು, ಟಿಕ್‌ಟಾಕ್ ಅತಿದೊಡ್ಡ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ನೇಪಾಳದಲ್ಲಿ ಅದೇ ಟಿಕ್‌ಟಾಕ್‌ನಲ್ಲಿ ಹರಿದಾಡಿದ ರೀಲ್ ಒಂದು ಇಡೀ ನೇಪಾಳದ ಜನರನ್ನು ನಿಜಕ್ಕೂ ಬಡಿದೆಬ್ಬಿಸಿದೆ.
ಅಷ್ಟಕ್ಕೂ ಆ ರೀಲ್‌ನಲ್ಲಿ ಇದ್ದ ಅಂಶವೇನೆಂದರೆ ರಾಜಕಾರಣಿಗಳ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಾರೆ, ದುಬಾರಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ, ಬೇಕಾಬಿಟ್ಟಿ ಪ್ರವಾಸ ಮಾಡುತ್ತಿದ್ದಾರೆ, ರಾಜಕಾರಣಿಗಳು ಹಾಗೂ ಉದ್ಯಮಿಗಳು ಮಾತ್ರ ಬೆಳವಣಿಗೆ ಹೊಂದುತ್ತಿದ್ದಾರೆ, ದೊಡ್ಡ ದೊಡ್ಡ ಹೊಟೇಲ್‌ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಸಾಮಾನ್ಯ ಜನರು ಹಾಗೂ ಅವರ ಮಕ್ಕಳ ಗತಿ ಇದಕ್ಕೆ ತದ್ವಿರುದ್ಧವಾಗಿದೆ, ನಮಗೆ ಮನೆ ಬಾಡಿಗೆ ಕಟ್ಟಲು ಸಹ ಆಗುತ್ತಿಲ್ಲ, ಕಾಲೇಜಿಗೆ ಬೇಕಾದ ಶುಲ್ಕ ಕೂಡಿಡಲು ಆಗುತ್ತಿಲ್ಲ, ತಕ್ಕಮಟ್ಟಿಗೆ ಜೀವನ ನಡೆಸುವಷ್ಟು ಸಂಬಳವನ್ನೂ ಪಡೆಯಲು ಆಗುತ್ತಿಲ್ಲ. ಹೀಗಿರುವಾಗ ರಾಜಕಾರಣಿಗಳು ಹಾಗೂ ಅವರ ಮಕ್ಕಳಿಗೆ ದುಡ್ಡು ಎಲ್ಲಿಂದ ಬಂತು? ಜನರ ತೆರಿಗೆ ದುಡ್ಡಲ್ಲಿಯೇ ಅವರು ಇಷ್ಟೆಲ್ಲ ಮಾಡುತ್ತಿದ್ದಾರೆ. ಎಂಬ ಅಂಶಗಳಿರುವ ರೀಲ್ ಎಲ್ಲೆಡೆ ವೈರಲ್ ಆಗಿತ್ತು. ಇದರ ಮೂಲಕ ತಮ್ಮ ಜೀವನ ಯಾವ ಹಂತಕ್ಕೆ ಕುಸಿದಿದೆ ಎಂದು ಮನಗಂಡ ನೇಪಾಳಿಗರು ಏಕಾಏಕಿ ರೊಚ್ಚಿಗೆದ್ದಿದ್ದಾರೆ.
ʼನೆಪೊ ಕಿಡ್ʼ ಎಂಬ ಹೆಸರಿನಡಿಯಲ್ಲಿ ವೈರಲ್ ಆದ ಈ ರೀಲ್‌ನಲ್ಲಿ ರಾಜಕಾರಣಿಗಳು ಹಾಗೂ ಅವರ ಮಕ್ಕಳು ಬಳಸುತ್ತಿದ್ದ ದುಬಾರಿ ವಸ್ತುಗಳ ಬೆಲೆ ಹಾಗೂ ಅವರ ಜೀನವಶೈಲಿಯ ವೆಚ್ಚಗಳನ್ನು ಬಹಿರಂಗಪಡಿಸಿ ತಿಳಿಸಲಾಗಿತ್ತು.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


