ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿಂದು (ಸೆಪ್ಟೆಂಬರ್ 10, ಬುಧವಾರ) ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. ಹಿಂದೂ ಪರ ಸಂಘಟನೆಗಳು, ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುವುದು. ಸುಮಾರು 20,000ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಬೆಳಗ್ಗೆ 10:30ಕ್ಕೆ ಮದ್ದೂರಿನ ಕಾಶಿ ವಿಶ್ವನಾಥ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ. ಹೊಳೆಬೀದಿ, ಪೇಟೆಬೀದಿ, ಟಿ.ಬಿ. ಸರ್ಕಲ್, ಹಳೆ ಬೆಂಗಳೂರು-ಮೈಸೂರು ರಸ್ತೆಯ ಮೂಲಕ ಸಾಗಿ ಕೊಲ್ಲಿ ಸರ್ಕಲ್ ತಲುಪಲಿದೆ. ಕೊನೆಯಲ್ಲಿ, ಹೊಳೆ ಆಂಜನೇಯ ದೇವಾಲಯದ ಬಳಿಯ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ.
ಗಣೇಶ ವಿವಾದದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಮದ್ದೂರಿಗೆ ಭೇಟಿ ನೀಡಲಿದ್ದಾರೆ. ಅವರು ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ, ಕಲ್ಲು ತೂರಾಟ ಮತ್ತು ಲಾಠಿ ಚಾರ್ಜ್ ಘಟನೆಗಳಲ್ಲಿ ಗಾಯಗೊಂಡವರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಲಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ 2,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಪೊಲೀಸರು, ಕೆಎಸ್‌ಆರ್‌ಪಿ, ಡಿಎಆರ್ ಮತ್ತು ಕ್ಷಿಪ್ರ ಕಾರ್ಯಪಡೆ (Rapid Action Force) ಕೂಡ ಭದ್ರತೆಯಲ್ಲಿ ಪಾಲ್ಗೊಂಡಿದ್ದಾರೆ.ಶಾಂತಿ ಸುವ್ಯವಸ್ಥೆ ಕಾಪಾಡಲು, ಮದ್ದೂರು, ಮಳವಳ್ಳಿ ಮತ್ತು ಮಂಡ್ಯ ತಾಲ್ಲೂಕುಗಳಲ್ಲಿ ಇಂದು ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಮೋದಿ-ಟ್ರಂಪ್ ಸ್ನೇಹ ಮಾತುಕತೆ: ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಬಲ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


