ಬೀದಿನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಂದ ಸ್ಥಳಾಂತರಿಸುವ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದ ನೀಡಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬೀದಿನಾಯಿಗಳ ಆಶ್ರಯ ತಾಣದ ಖರ್ಚು ಎಷ್ಟಾಗಲಿದೆ? ಎಂದು ಲೆಕ್ಕಾಚಾರ ಹಾಕಿದೆ. ಮಾಸಿಕ ಸುಮಾರು 60.70 ಕೋಟಿ ರೂ.ಗಳಿಗೂ ಅಧಿಕ ಮೊತ್ತ ನಿರ್ವಹಣೆಗೆ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಒಂದು ಶ್ವಾನವನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಸಂರಕ್ಷಣೆ ಮಾಡಲು ಮಾಸಿಕ 3,035 ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದಲ್ಲಿ ಜಿಬಿಎ ವ್ಯಾಪ್ತಿಯಲ್ಲಿ 2.5 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿವೆ. ಈಗಾಗಲೇ ಬೀದಿನಾಯಿಗಳಿಗೆ ದಿನಕ್ಕೆ 2 ಬಾರಿ ಚಿಕನ್ ರೈಸ್ ನೀಡಲು ತೀರ್ಮಾನಿಸಲಾಗಿದೆ.
ಈಗ ಜಿಬಿಎ ಅಧಿಕಾರಿಗಳು ಬೀದಿನಾಯಿಗಳನ್ನು ಗುರುತಿಸಿ, ಅವುಗಳನ್ನು ಹಿಡಿದು ಆಶ್ರಯ ಕೇಂದ್ರಗಳಲ್ಲಿ ಸಂರಕ್ಷಣೆ ಮಾಡಲು ಎಷ್ಟು ಖರ್ಚಾಗಲಿದೆ? ಎಂದು ಲೆಕ್ಕಹಾಕುತ್ತಿದೆ. ಸುಮಾರು 2 ಲಕ್ಷ ಶ್ವಾನಗಳನ್ನು ಸಂರಕ್ಷಣೆ ಮಾಡಲು 60.70 ಕೋಟಿ ರೂ. ಖರ್ಚು ಆಗುತ್ತದೆ ಎಂದು ಅಂದಾಜಿಸಿದೆ. ಆದರೆ ನಿರ್ವಹಣಾ ವೆಚ್ಚವನ್ನು ಭರಿಸುವುದು ಹೇಗೆ? ಎಂಬುದು ಪ್ರಶ್ನೆಯಾಗಿದೆ.
ಜಿಬಿಎಗೆ ಅನುದಾನದ ಸಂಕಟ: ಬಿಬಿಎಂಪಿಯನ್ನು 5 ನಗರ ಪಾಲಿಕೆಯಾಗಿ ವಿಭಾಗ ಮಾಡಲಾಗಿದೆ. ಐದು ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಎರಡೂವರೆ ವರ್ಷ ಬೀದಿನಾಯಿಗಳಿಗೆ ಎಂದು ಅಂದಾಜಿಸಲಾಗಿದೆ. ಅವುಗಳನ್ನು ಆಶ್ರಯ ಕೇಂದ್ರಗಳಲ್ಲಿ ಸಂರಕ್ಷಣೆ ಮಾಡಲು ವೆಚ್ಚ ಹೆಚ್ಚಾಗಲಿದ್ದು, ಅದನ್ನು ಎಲ್ಲಿಂದ ಭರಿಸುವುದು? ಎಂಬುದು ಅಧಿಕಾರಿಗಳ ಪ್ರಶ್ನೆ.
ತಾತ್ಕಾಲಿಕವಾಗಿ ಬೀದಿನಾಯಿಗಳನ್ನು ಸ್ಥಳಾಂತರ ಮಾಡಲು ಕೆಲವು ಎನ್‌ಜಿಒಗಳನ್ನು ಜಿಬಿಎ ಗುರುತಿಸಿದೆ. ವಸತಿ ಪ್ರದೇಶದಲ್ಲಿರುವ ಬೀದಿನಾಯಿಗಳಿಂದ ಈಗಾಗಲೇ ತೊಂದರೆಯಾಗುತ್ತಿದ್ದು, ಅವುಗಳನ್ನು ಸ್ಥಳಾಂತರ ಮಾಡಬೇಕಿದೆ. ಭವಿಷ್ಯದಲ್ಲಿ ಹೆಚ್ಚಿನ ಬೀದಿನಾಯಿಗಳು ಆಗಮಿಸಿದರೆ ಅವುಗಳ ನಿರ್ವಹಣೆ ಸವಾಲಿನ ಕೆಲಸವಾಗಲಿದೆ.
ಬಿಬಿಎಂಪಿ ಇದ್ದಾಗ ಒಂದು ಹೊತ್ತು ಗುರುತಿಸಿದ ಸ್ಥಳದಲ್ಲಿ ಬೀದಿನಾಯಿಗಳಿಗೆ ಆಹಾರವನ್ನು ನೀಡಲು ಯೋಜನೆ ರೂಪಿಸಲಾಗಿತ್ತು. ಆದರೆ ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಆದ್ದರಿಂದ ಯೋಜನೆ ಕೈಬಿಡಲಾಗಿತ್ತು. ಆದರೆ ಈಗ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಬೀದಿನಾಯಿಗಳನ್ನು ಸಂರಕ್ಷಣೆ ಮಾಡಲೇಬೇಕಾಗಿದೆ.
ಆಶ್ರಯ ಕೇಂದ್ರದಲ್ಲಿ ಬರುವ ಬೀದಿನಾಯಿಗಳಿಗೆ ಎರಡು ಹೊತ್ತು ಚಿಕನ್ ರೈಸ್ ನೀಡಲು ಜಿಬಿಎ ಚಿಂತನೆ ನಡೆಸಿದೆ. ಇದರ ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತದೆ. ಆಹಾರ ಮತ್ತು ಇತರ ಖರ್ಚನ್ನು ಎಲ್ಲಿಂದ ಭರಿಸುವುದು? ಎಂದು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಜಿಬಿಎ ವ್ಯಾಪ್ತಿಯಲ್ಲಿರುವ ಶ್ವಾನಗಳನ್ನು ಗುರುತಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಆಸ್ಪತ್ರೆ, ಆಟದ ಮೈದಾನ, ಇತರ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಬೀದಿನಾಯಿಗಳನ್ನು ಮೊದಲ ಹಂತದಲ್ಲಿ ಗುರುತಿಸಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 1,623, ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 131, ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 222, ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 37 ಸೇರಿದಂತೆ ಇದುವರೆಗೂ ಒಟ್ಟು 2,206 ಶ್ವಾನಗಳನ್ನು ಗುರುತಿಸಲಾಗಿದೆ.
ಮುಂದಿನ ಕೆಲವು ದಿನಗಳಲ್ಲಿ ಬೀದಿನಾಯಿಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ಣವಾಗಲಿದೆ. ಬಳಿಕ ಅವುಗಳನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರ ಮಾಡುವ ಕುರಿತು ಜಿಬಿಎ ಸ್ಪಷ್ಟವಾದ ಮಾರ್ಗಸೂಚಿಯನ್ನು ತಯಾರು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿನ ಬೀದಿನಾಯಿಗಳನ್ನು ಮಹಾನಗರ ಪಾಲಿಕೆ ವತಿಯಿಂದ ಹಿಡಿದು ಅವುಗಳನ್ನು ಆಶ್ರಯ ತಾಣಕ್ಕೆ ಸಾಗಿಸುತ್ತಿದೆ. ಈ ನಾಯಿಗಳನ್ನು ದತ್ತು ಪಡೆದು ಅವುಗಳನ್ನು ಪೋಷಣೆ ಮಾಡಲು ಇಚ್ಚಿಸುವವರು, ಪ್ರಾಣಿಗಳ ಸಂರಕ್ಷಣೆ ಸಂಕಲ್ಪ ಹೊಂದಿರುವವರು, ಪ್ರಾಣಿಗಳ ಮೇಲೆ ದಯೆ ಇರುವವರು ಬೀದಿನಾಯಿಗಳನ್ನು ದತ್ತು ಪಡೆಯಲು ಅಥವಾ ಆಶ್ರಣ ತಾಣದಲ್ಲಿರುವ ಬೀದಿನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವವರು ಇದ್ದಲ್ಲಿ ಪಾಲಿಕೆಯನ್ನು ಸಂಪರ್ಕಿಸಿ ಎಂದು ಕರೆ ನೀಡಲಾಗಿದೆ. ಈ ಮಾದರಿ ಎಲ್ಲಾ ಮಹಾನಗರ ಪಾಲಿಕೆಯಲ್ಲಿಯೂ ಜಾರಿಗೊಳಿಸಬಹುದು ಎಂಬ ಚಿಂತನೆಯೂ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


