ಪ್ರಚಾರ.. ಸಿನಿಮಾವೊಂದು ಬಿಡುಗಡೆಯಾಗುವ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಾದ ಮೂಲ ಅಂಶ. ಹೆಚ್ಚೇನೂ ಪ್ರಚಾರವಿಲ್ಲದೇ ಬಿಡುಗಡೆಗೊಂಡ ಕೆಲ ಸಿನಿಮಾಗಳು ಬಳಿಕ ಜನರೇ ಚಿತ್ರ ಮೆಚ್ಚಿ ಕೊಟ್ಟ ಪ್ರಚಾರದಿಂದ ಬಾಕ್ಸ್ ಆಫೀಸ್ ನಡುಗಿಸಿವೆ. ಕೆಲವೊಮ್ಮೆ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳು ಸರಿಯಾದ ಪ್ರಚಾರವಿಲ್ಲದೇ ಮೂಲೆಗುಂಪಾದ ಉದಾಹರಣೆಗಳೂ ಸಹ ಇವೆ.
ಒಟ್ಟಿನಲ್ಲಿ ಪ್ರತಿ ಚಿತ್ರಕ್ಕೂ ಪ್ರಚಾರ ಬಿಡುಗಡೆ ಸಮಯದ ಪ್ರಮುಖ ವಿಚಾರವಾಗಿದೆ. ಈ ಹಿಂದೆ ಎಲ್ಲ ಚಿತ್ರರಂಗಗಳಲ್ಲಿಯೂ ಚಿತ್ರ ಬಿಡುಗಡೆಯಾಗುವುದರ ಬಗ್ಗೆ ಪತ್ರಿಕಾಗೋಷ್ಟಿಯನ್ನು ಆಯೋಜಿಸುವುದರ ಮೂಲಕ ಪ್ರಚಾರವನ್ನು ಮಾಡುತ್ತಿದ್ದರು. ಕಾಲ ಬದಲಾದಂತೆ ಟ್ರೈಲರ್, ಟೀಸರ್, ಮೋಷನ್ ಪೋಸ್ಟರ್, ವಿವಿಧ ಊರುಗಲ್ಲಿ ಹಾಡು, ಟ್ರೈಲರ್ ಬಿಡುಗಡೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಆರಂಭಿಸಿದರು.
ಇಲ್ಲಿಯವರೆಗೆ ಎಲ್ಲವೂ ಒಕೆ. ಆದರೆ ನಂತರದ ಬೆಳವಣಿಗೆಗಳು ಚಿತ್ರದ ಪ್ರಚಾರದ ವೈಖರಿಯನ್ನೇ ಬದಲಿಸಿದ್ದು, ಸಿನಿ ರಸಿಕರು ಇಂತಹ ಪ್ರಚಾರವಾದರೂ ಯಾಕೆ ಎನ್ನುವಂತಾಗಿದೆ. ಹಣ ಹಾಕಿ ಯುಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡು ಸಂಭ್ರಮಿಸುವ ಮೂಲಕ ಶುರುವಾದ ಅನಗತ್ಯ ಪ್ರಚಾರದ ಗೀಳು ಚಿತ್ರಮಂದಿರಕ್ಕೆ ಹೌಸ್‌ಫುಲ್ ಬೋರ್ಡ್ ಅನ್ನು ಹಣ ನೀಡಿ ಒತ್ತಾಯ ಮಾಡಿ ಹಾಕಿಸುವ ಮಟ್ಟಕ್ಕೆ ಬಂದು ತಲುಪಿದೆ.
ಬಾಲಿವುಡ್ ಕುರಿತಾಗಿ ಕೋಮಲ್ ನಾಟಾ ಹಾಗೂ ಭಾರತಿ ಎಸ್ ಪ್ರಧಾನ್ ಯುಟ್ಯೂಬ್ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದು, ಸಿನಿಮಾ ಬಿಡುಗಡೆ ಸಮಯದಲ್ಲಿ ನಿರ್ಮಾಪಕರು ಎಷ್ಟು ಹೀನಾಯವಾಗಿ ವರ್ತಿಸುತ್ತಾರೆ ಎಂಬುದನ್ನು ಇದರಲ್ಲಿ ಬಿಚ್ಚಿಟ್ಟಿದ್ದಾರೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಬೇಕಂತಲೇ ಹೆಚ್ಚು ಪ್ರಕಟಿಸುತ್ತಾರೆ ಎಂದ ಕೋಮಲ್ ನಾಟಾ ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್ ಸಿನಿಮಾವನ್ನು ಉದಾಹರಣೆಯಾಗಿ ನೀಡಿ ಬಾಲಿವುಡ್ ಬಂಡವಾಳ ಬಯಲು ಮಾಡಿದರು. “ಚಿತ್ರ ಮೊದಲ ವಾರ ಗಳಿಸಿದ್ದು 40 ಕೋಟಿಯಾದರೆ ಚಿತ್ರತಂಡ 80 ಕೋಟಿ ಕಲೆಕ್ಷನ್ ಎಂದು ಘೋಷಿಸಿಕೊಂಡಿತ್ತು. ಇದರ ಬೆನ್ನಲ್ಲೇ ಚಿತ್ರ ಪ್ರದರ್ಶಕರೊಬ್ಬರ ಕರೆ ಬಂತು. 300 ಸೀಟ್ ಇರುವ ನನ್ನ ಚಿತ್ರಮಂದಿರಲ್ಲಿ ಕೇವಲ 40 ಟಿಕೆಟ್ ಮಾರಾಟವಾಗಿದ್ದವು. ಚಿತ್ರತಂಡದವರು ಕರೆ ಮಾಡಿ ಹೌಸ್‌ಫುಲ್ ಬೋರ್ಡ್ ಹಾಕಿ ನಿಮ್ಮ ಖಾತೆಗೆ ದುಡ್ಡು ಬರುತ್ತೆ ಎಂದರು” ಎಂದು ತಿಳಿಸಿದ್ದಾರೆ.
ಇನ್ನು ಈ ಸ್ಥಿತಿ ಕೇವಲ ಬಾಲಿವುಡ್‌ನದ್ದು ಮಾತ್ರವಲ್ಲ, ಟಾಲಿವುಡ್‌ನಲ್ಲೂ ಕೇಳಿಬಂದಿತ್ತು. ಕನ್ನಡದಲ್ಲೂ ಇಂತಹ ಪ್ರಚಾರದ ಗೀಳಿದ್ದು, ಇಷ್ಟು ದೊಡ್ಡ ಮಟ್ಟವನ್ನು ತಲುಪದಿದ್ದರೂ ಚಿತ್ರಮಂದಿರದ ಮುಂದೆ ಚಿತ್ರ ಸೂಪರ್, ಚಿಂದಿ ಚಿತ್ರಾನ್ನ ಎನ್ನುವವರಿಗೆ ದುಡ್ಡು ನೀಡಿ ನಕಲಿ ವಿಮರ್ಶೆ ಕೊಡಿಸುವುದರ ಹಂತದಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


