ಬೆಂಗಳೂರು: ಮೊನ್ನೆ ( ಮಾರ್ಚ್ 9 ) ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 50 ಒವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿತು. ಈ ಗೆಲುವಿನ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದು, ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎಂಬ ದಾಖಲೆ ಬರೆಯಿತು.
ತಂಡದ ಪರ ಶ್ರೇಯಸ್ ಐಯ್ಯರ್ ಹಾಗೂ ವಿರಾಟ್ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರರೆನಿಸಿಕೊಂಡರೆ, ತಲಾ 9 ವಿಕೆಟ್ ಪಡೆದ ಮೊಹಮ್ಮದ್ ಶಮಿ ಹಾಗೂ ವರುಣ್ ಚಕ್ರವರ್ತಿ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರು ಎನಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ವಿಲ್ ಯಂಗ್ ಹಾಗೂ ಅಪಾಯಕಾರಿ ಆಟಗಾರ ಗ್ಲೆನ್ ಫಿಲಿಪ್ಸ್ ವಿಕೆಟ್ ಪಡೆದ ವರುಣ್ ಚಕ್ರವರ್ತಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗೆ ಹೀರೊ ಆಗಿ ಮಿಂಚಿರುವ ವರುಣ್ ಚಕ್ರವರ್ತಿ ಕನ್ನಡ ಮಾತನಾಡಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಬೀದರ್ ಜಿಲ್ಲೆಯಲ್ಲಿ ಜನಿಸಿದ ವರುಣ್ ಚಕ್ರವರ್ತಿ ಚೆನ್ನೈನಲ್ಲಿ ಬೆಳೆದಿದ್ದು, ರಣಜಿಯಲ್ಲಿ ತಮಿಳುನಾಡು ಪರ ಆಡುತ್ತಾರೆ. ತಂದೆ ತಮಿಳಿನವರಾದರೆ, ವರುಣ್ ತಾಯಿ ಮಾಲಿನಿ ಕನ್ನಡತಿ. ಹೀಗೆ ಬೀದರ್‌ನಲ್ಲಿ ಹುಟ್ಟಿದ ವರುಣ್ ಚಕ್ರವರ್ತಿ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆಂಬುದು ಈ ವಿಡಿಯೊ ಮೂಲಕ ತಿಳಿದುಬಂದಿದೆ. ಕೊವಿಡ್ ಸಮಯದ ವಿಡಿಯೊ ಇದ್ದಾಗಿದ್ದು ಬೀದರ್ ಜಿಲ್ಲೆಯ ಜನರೇ ನಮಸ್ಕಾರ ಕೊವಿಡ್ ಸಮಯದಲ್ಲಿ ಎಚ್ಚರಿಕೆಯಿಂದ ಮನೆಯಲ್ಲೇ ಇರಿ ಎಂದು ವಿವಿಯೊದಲ್ಲಿ ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


