1986ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಎನಿಸಿಕೊಂಡ ‘ಆನಂದ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಡಾ. ಶಿವರಾಜ್‌ಕುಮಾರ್ ಅವರು, ಇಂದು 40 ವರ್ಷಗಳ ಯಶಸ್ವಿ ಸಿನಿ ಪಯಣವನ್ನು ಪೂರೈಸಿದ್ದಾರೆ.
ಈ ನಾಲ್ಕು ದಶಕಗಳಲ್ಲಿ ಅವರು ನೂರಾರು ಚಿತ್ರಗಳಲ್ಲಿ ಅಭಿನಯಿಸಿ, ವಿಭಿನ್ನ ಪಾತ್ರಗಳನ್ನು ಭರದಿಂದ ಪೂರೈಸಿ, ಕನ್ನಡ ಸಿನೆಮಾಕ್ಕೆ ಒಂದು ನವಚೇತನವನ್ನು ತಂದಿದ್ದಾರೆ.’ಕರುನಾಡ ಚಕ್ರವರ್ತಿ’ ಎಂಬ ಗೌರವದ ಬಿರುದನ್ನು ಸಮರ್ಥವಾಗಿ ಧರಿಸಿರುವ ಶಿವಣ್ಣ, ತಮ್ಮ ಸರಳತೆ, ಶಿಸ್ತಿನ ನಟನೆ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಈ ವಿಶೇಷ ಮೈಲಿಗಲ್ಲನ್ನು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ವಿಶೇಷ ಮೈಲಿಗಲ್ಲನ್ನು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ‘ಕಿಚ್ಚ’ ಸುದೀಪ್ ಕೂಡ ಶಿವಣ್ಣರ ಸಾಧನೆಯನ್ನು ಹೃತ್ಪೂರ್ವಕವಾಗಿ ಹೊಗಳಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಶುಭ ಹಾರೈಸಿದ್ದಾರೆ.
“ನೀವು ಯಶಸ್ಸನ್ನು ಸದಾ ಸರಳವಾಗಿ ನಿಭಾಯಿಸಿದ್ದೀರಿ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ನೀವು ಸದಾ ಒಬ್ಬ ಉತ್ತಮ ಮನುಷ್ಯರಾಗಿ ಬಾಳಿದ್ದೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರಲಿ ಮತ್ತು ಇನ್ನೂ ಹಲವಾರು ವರ್ಷಗಳ ಕಾಲ ನಿಮ್ಮ ಅಭಿನಯದಿಂದ ನಮಗೆ ಮನರಂಜನೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ಪ್ರೀತಿ ಮತ್ತು ಆತ್ಮೀಯತೆಯೊಂದಿಗೆ” ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಶಿವರಾಜ್‌ಕುಮಾರ್ ಅವರ 40 ವರ್ಷದ ಸಿನಿ ಜರ್ನಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಹಾರೈಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ, ಮತ್ತು ಅವರ ಮುಂದಿನ ಸಾಧನೆಗಳಿಗೆ ಉತ್ಸಾಹದಿಂದ ನಿರೀಕ್ಷಿಸುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


