ಬೆಂಗಳೂರು;ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ED) ಇಂದು ಬೆಳಗ್ಗೆ ಬಳ್ಳಾರಿ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರುಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ.ಸಂಡೂರಿನ ಸಂಸದ ಇ. ತುಕಾರಾಂ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದು, ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಈ ದಾಳಿ ನಡೆದಿದೆ.
ಈ ಹಣ ಮತದಾರರಿಗೆ ತಲಾ ₹200 ಹಂಚಲು ಬಳಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.ಇದೇ ವೇಳೆ, ಬಳ್ಳಾರಿ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರಾದ ನಾರಾ ಭರತ್ ರೆಡ್ಡಿ (ಬಳ್ಳಾರಿ ನಗರ), ಗಣೇಶ್ (ಕಂಪ್ಲಿ), ಮತ್ತು ಶ್ರೀನಿವಾಸ್ (ಕೊಡ್ಲಿಗಿ) ಅವರ ಮನೆಗಳ ಮೇಲೂ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಆಸ್ತಿ ಹಾಗೂ ಹಣಕಾಸು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಮಾಜಿ ಸಚಿವ ಬಿ. ನಾಗೇಂದ್ರಗೂ ಇಡಿ ದಾಳಿ
ಬೆಂಗಳೂರುದಲ್ಲಿರುವ ಶಾಸಕರ ಭವನದ ಒಳಗಿನ ಕಚೇರಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ಕಚೇರಿಯ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೋಕಸಭೆ ಚುನಾವಣೆಯಲ್ಲಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಅವರ ಕಚೇರಿ ಹಾಗೂ ಮನೆಗಳಲ್ಲಿ ಇಡಿ ಅಧಿಕಾರಿಗಳು ವ್ಯಾಪಕವಾಗಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದರು. ಈ ಪ್ರಕರಣದ ಒತ್ತಡಕ್ಕೆ ಒಳಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇತ್ತೀಚೆಗೆ ಅವರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ
ಭರತ್ ರೆಡ್ಡಿ ಮನೆಗೆ ‘ನೋ ಎಂಟ್ರಿ’
ನಾರಾ ಭರತ್ ರೆಡ್ಡಿ ಅವರ ಮನೆ ಮೇಲೆ ನಡೆದ ದಾಳಿ ವೇಳೆ ಅಧಿಕಾರಿಗಳು ಮನೆಯ ಬಾಗಿಲುಗಳನ್ನು ಮುಚ್ಚಿ, ಯಾವುದೇ ವ್ಯಕ್ತಿಗೂ ಪ್ರವೇಶ ನೀಡಿಲ್ಲ. ಕೇವಲ ಮನೆಯ ಕೆಲಸದ ಮಹಿಳೆಯೊಬ್ಬರಿಗೆ ಮಾತ್ರ ಅಧಿಕಾರಿಗಳ ಅನುಮತಿಯೊಂದಿಗೆ ಒಳಗೆ ಹೋಗಲು ಅವಕಾಶ ನೀಡಲಾಗಿದೆ.ಈ ಎಲ್ಲ ದಾಳಿಗಳು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಣಕಾಸು ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಹಾಗೂ ಚುನಾವಣಾ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ನಡೆಸಲಾಗಿದ್ದು, ಪ್ರಕರಣವನ್ನು ಸಿಬಿಐ ಹಾಗೂ ಇಡಿ ಪ್ರತ್ಯೇಕವಾಗಿ ತನಿಖೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಈ ತನಿಖೆಯಲ್ಲಿ ಒಳಗಾಗುವ ಸಾಧ್ಯತೆ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


