ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾಲೀಕರಾದ ಡಿಯೊಜಿಯೊ ತಂಡವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.
ಹೌದು, ನಿನ್ನೆಯಿಂದ ( ಜೂನ್ 10 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ಮಾಲೀಕರು ಯೋಜನೆ ರೂಪಿಸುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗೆಲುವಿನ ನಂತರ 2 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿರುವ ಫ್ರಾಂಚೈಸಿಯನ್ನು ಯಾರು ಕೊಳ್ಳಲಿದ್ದಾರೆ ಎಂಬ ಚರ್ಚೆ ಸಹ ಇದರ ಬೆನ್ನಲ್ಲೇ ಆರಂಭವಾಗಿದೆ.
ಅದರಲ್ಲಿಯೂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಶಿವಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲಿದ್ದಾರೆ ಎಂಬ ಪೋಸ್ಟ್‌ಗಳು ಎಕ್ಸ್ ಖಾತೆಯಲ್ಲಿ ಹರಿದಾಡಿವೆ. ಕರ್ನಾಟಕದ ತಂಡಕ್ಕೆ ಕನ್ನಡಿಗರೇ ಮಾಲೀಕರಾದರೆ ಒಳ್ಳೆಯದು, ಡಿಕೆ ಶಿವಕುಮಾರ್ ಪುತ್ರಿ ತಂಡವನ್ನು ಖರೀದಿಸಲಿ ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಕೆಲವರು ಈ ತಂಡವನ್ನು ಡಿಕೆ ಶಿವಕುಮಾರ್ ಕುಟುಂಬ ಖರೀದಿಸಲು ಮುಂದಾಗಿದೆ ಎಂದಿದ್ದರು. ಈ ಊಹಾಪೋಹಗಳಿಗೆಲ್ಲ ತೆರೆ ಎಳೆದಿರುವ ಡಿಕೆ ಶಿವಕುಮಾರ್ ʼನಾನು ಹುಚ್ಚು ಮನುಷ್ಯನಲ್ಲ. ಚಿಕ್ಕ ವಯಸ್ಸಿನಿಂದ ಕೆಎಸ್‌ಸಿಎ ಸದಸ್ಯನಾಗಿದ್ದೇನೆ ಅಷ್ಟೇ. ಮ್ಯಾನೇಜ್‌ಮೆಂಟ್‌ನಲ್ಲಿ ಭಾಗಿಯಾಗುವ ಆಫರ್ ಬಂದರೂ ನನಗೆ ಸಮಯವಿಲ್ಲ. ನನ್ನ ಸ್ವಂತ ಶಿಕ್ಷಣ ಸಂಸ್ಥೆಯನ್ನೇ ನನ್ನ ಕುಟುಂಬದವರಿಗೆ ಬಿಟ್ಟುಕೊಟ್ಟು ಬಂದಿರುವ ನನಗೆ ಆರ್‌ಸಿಬಿ ಏತಕೆ ಬೇಕು? ನಾನು ರಾಯಲ್ ಚಾಲೆಂಜ್ ಅನ್ನೂ ಸಹ ಕುಡಿಯುವುದಿಲ್ಲʼ ಎಂದು ಹೇಳಿಕೆ ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


