ಬೆಂಗಳೂರು;ವೊಡಾಫೋನ್ ಐಡಿಯಾ (Vi), ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಯು, ಬೆಂಗಳೂರಿನಲ್ಲಿ ಜೂನ್ 11, 2025ರಿಂದ ತನ್ನ 5G ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ. ಇದರಿಂದ ತಂತ್ರಜ್ಞಾನ ಕೇಂದ್ರವಾಗಿ ಖ್ಯಾತಿಯ ಬೆಂಗಳೂರು ಮಹಾನಗರದ ನಿವಾಸಿಗಳು ಮತ್ತು ನಗರದಲ್ಲಿನ ಉದ್ಯಮಗಳು ಈಗ Vi 5G ಜಾಲದಲ್ಲಿ ಅತ್ಯಂತ ವೇಗದ ಡೇಟಾ, ಕಡಿಮೆ ವಿಳಂಬ ಮತ್ತು ಉತ್ತಮ ಸಂಪರ್ಕ ಸೌಲಭ್ಯಗಳ ಪ್ರಯೋಜನ ಪಡೆಯಬಹುದು.ಉದ್ಯಾನನಗರಿಯಲ್ಲಿ ಈಗಾಗಲೇ 5G ಸೇವೆ ನೀಡುತ್ತಿರುವ ರಿಲಾಯನ್ಸ್ ಜಿಯೋ ಮತ್ತು ಏರ್‌ಟೆಲ್ ಸಾಲಿಗೆ ವೊಡಾಫೋನ್ ಐಡಿಯಾ ಸೇರ್ಪಡೆಯಾಗಿದೆ. Vi ಸಂಸ್ಥೆ ಕಳೆದ ತಿಂಗಳು ಮುಂಬೈ, ಪಟ್ನಾ ಮತ್ತು ಚಂಡೀಗಡದಲ್ಲಿ 5G ನೆಟ್ವರ್ಕ್ ಆರಂಭಿಸಿತ್ತು. ಬೆಂಗಳೂರಿನಲ್ಲಿ 5G ಜಾಲದ ಅಭಿವೃದ್ಧಿಗೆ Vi ಸಂಸ್ಥೆ ಸ್ಯಾಮ್ಸಂಗ್‌ನ ಸಹಕಾರ ಪಡೆದುಕೊಂಡಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಎಐ ಆಧಾರಿತ ನೆಟ್‌ವರ್ಕ್ ಆಪ್ಟಿಮೈಸೇಶನ್(AI based network optimization) ಬಳಸಲಾಗಿದೆ.
Vi 5G ಸೇವೆಗಳನ್ನು ಬಳಸಲು 5G ಸಪೋರ್ಟ್ ಇರುವ ಮೊಬೈಲ್‌ಗಳನ್ನು ಹೊಂದಿರುವ ಬಳಕೆದಾರರು, ಕನಿಷ್ಠ ₹299 ಶುರುವಾಗುವ ಪ್ಲ್ಯಾನ್ಗಳನ್ನು ಆಯ್ಕೆ ಮಾಡಿಕೊಂಡರೆ, ಪ್ರಾರಂಭಿಕ ಆಫರ್‌ನಡಿ ಅನಿಯಮಿತ 5G ಡೇಟಾ ಬಳಸಬಹುದು. ಈ ಸೇವೆಯು ಸ್ಟ್ರೀಮಿಂಗ್, ಗೇಮಿಂಗ್, ವಿಡಿಯೋ ಕಾಲಿಂಗ್, ಕ್ಲೌಡ್ ಆಕ್ಸೆಸ್ ಮುಂತಾದ ಹೆಚ್ಚಿನ ಡೇಟಾ ಬೇಡಿಕೆಯ ಬಳಕೆಗಳಿಗೆ ಅನುಕೂಲವಾಗುವಂತೆ ರೂಪುಗೊಂಡಿದೆ.Vi ಸಂಸ್ಥೆ, ಆಗಸ್ಟ್ 2025ರೊಳಗೆ ತನ್ನ 5G ಜಾಲವನ್ನು ದೇಶದ ಎಲ್ಲಾ 17 ಪ್ರಾಥಮಿಕ ವಲಯಗಳಲ್ಲಿ ವಿಸ್ತರಿಸುವ ಯೋಜನೆ ಹೊಂದಿದೆ. ಬೆಂಗಳೂರು ನಗರದಲ್ಲಿ 5G ಜತೆಗೆ 4G ಜಾಲಕ್ಕೂ ಹೆಚ್ಚಿನ ಸುಧಾರಣೆಗಳನ್ನು ತಂದಿದ್ದು, ಕಳೆದ 10 ತಿಂಗಳಲ್ಲಿ ಒಳಾಂಗಣ ಕವರೆಜ್ ಮತ್ತು ಜಾಲ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.Vi ಸಂಸ್ಥೆಯ ಕರ್ನಾಟಕ ವಿಭಾಗದ ಮುಖ್ಯಸ್ಥ ಆನಂದ್ ದಾನಿ ಅವರು, “ಟೆಕ್ ಮತ್ತು ಡಿಜಿಟಲ್ ನಾವೀನ್ಯತೆಯ ಮುಂಚೂಣಿಯಲ್ಲಿರುವ ಬೆಂಗಳೂರಿಗೆ Vi 5G ಸೇವೆ ತರಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಮುಂದಿನ ತಲೆಮಾರಿನ 5G ಮತ್ತು ಸುಧಾರಿತ 4G ಜಾಲದಿಂದ ಬಳಕೆದಾರರಿಗೆ ಉತ್ತಮ ಅನುಭವ ಒದಗಿಸಲು ಪ್ರಯತ್ನಿಸುತ್ತಿದ್ದೇವೆ,” ಎಂದಿದ್ದಾರೆ.
ಮೊಬೈಲ್ ಸೇವೆ ಬಲಪಡಿಸಲು Vi ಕಂಪನಿಯ ಹೆಜ್ಜೆ: 46% ಸಾಮರ್ಥ್ಯ ಹೆಚ್ಚಳ
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸ್ಥಿರ ದೂರಸಂಪರ್ಕ ಸೇವೆ ನೀಡುವ ಉದ್ದೇಶದಿಂದ, Vi ಸಂಸ್ಥೆ ಕಳೆದ 10 ತಿಂಗಳಲ್ಲಿ ಪ್ರಮುಖ ತಾಂತ್ರಿಕ ನವೀಕರಣಗಳನ್ನು ಜಾರಿಗೆ ತಂದಿದೆ. ಈ ಅವಧಿಯಲ್ಲಿ ಸಂಸ್ಥೆಯು ತೆಗೆದುಕೊಂಡ ಪ್ರಮುಖ ಹೆಜ್ಜೆಗಳು:
ಸುಮಾರು 3,000 ಸೈಟ್‌ಗಳಲ್ಲಿ 900 ಮೆಗಾಹರ್ಟ್ಸ್ ತರಂಗಾಂತರವನ್ನು ನಿಯೋಜನೆ ಮಾಡಲಾಗಿದೆ.
1,800 ಸೈಟ್‌ಗಳಲ್ಲಿ 2100 ಮೆಗಾಹರ್ಟ್ಸ್ ತರಂಗಾಂತರ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ.
1,000 ಹೊಸ ಸ್ಥಳಗಳಲ್ಲಿ 2100 ಮೆಗಾಹರ್ಟ್ಸ್ ತರಂಗಾಂತರವನ್ನು ಸೇರಿಸಲಾಗಿದೆ.
4,100ಕ್ಕೂ ಹೆಚ್ಚು ಸೈಟ್‌ಗಳಲ್ಲಿ 1800 ಮೆಗಾಹರ್ಟ್ಸ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.
ಈ ಎಲ್ಲಾ ಉಪಕ್ರಮಗಳ ಪರಿಣಾಮವಾಗಿ, ಗ್ರಾಹಕರಿಗೆ ಹೆಚ್ಚಿನ ತಲುಪುವಿಕೆ, ಉತ್ತಮ ಡೇಟಾ ಸೇವೆ ಹಾಗೂ ದತ್ತಾಂಶ ದಟ್ಟಣೆ ನಿರ್ವಹಣೆಯಲ್ಲಿ ಕಂಪೆನಿಯ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಿದೆ. 2024ರ ಮಾರ್ಚ್ ತಿಂಗಳಿಗೆ ಸಂಸ್ಥೆಯ ಒಟ್ಟು ಸಾಮರ್ಥ್ಯದಲ್ಲಿ ಶೇಕಡಾ 46ರಷ್ಟು ಹೆಚ್ಚಳ ಕಂಡುಬಂದಿದೆ.ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೇಗವಂತವಾದ ಮತ್ತು ಗುಣಮಟ್ಟದ ಮೊಬೈಲ್ ಸೇವೆ ನೀಡುವಲ್ಲಿ ಕಂಪೆನಿಯ ಬದ್ಧತೆ ಈ ನವೀಕರಣಗಳ ಮೂಲಕ ಸ್ಪಷ್ಟವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


