Wednesday, September 2, 2026
spot_img
More
    spot_img
    HomeLatest news'ನಿನ್ನ ನಡವಳಿಕೆ ಇಷ್ಟವಾಯಿತು' ಎಂದು ನಿಖಿಲ್‌ಗೆ ಹೇಳಿದ್ದ ಎಸ್‌ಎಂ ಕೃಷ್ಣ

    ‘ನಿನ್ನ ನಡವಳಿಕೆ ಇಷ್ಟವಾಯಿತು’ ಎಂದು ನಿಖಿಲ್‌ಗೆ ಹೇಳಿದ್ದ ಎಸ್‌ಎಂ ಕೃಷ್ಣ

    ಮಂಡ್ಯ/ಬೆಂಗಳೂರು: ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು, ಆ ನಂತರ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿ ಅಗಲಿದ ಚೇತನಕ್ಕೆ ನಮನ ಸಲ್ಲಿಸಿದ್ದಾರೆ.

    Advertisement

    ನಮ್ಮೆಲ್ಲರನ್ನೂ ಬಿಟ್ಟು ಅಗಲಿದ ಕರ್ನಾಟಕದ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿಗಳು ಆಗಿದ್ದ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಮದ್ದೂರಿನ ಸೋಮನಹಳ್ಳಿ ಗ್ರಾಮಕ್ಕೆ ತೆರಳಿ ಅಂತಿಮ ನಮನ ಸಮರ್ಪಣೆ ಮಾಡಿದೆ.

    ಸರಳತೆ, ಸಜ್ಜನಿಕೆ, ವಿನಯದ ಮೇರು ಶಿಖರವಾಗಿದ್ದ ಅವರು ವೈಯಕ್ತಿಕವಾಗಿ ನನಗೆ ಬಹಳ ಆದರಣೀಯರು. ನಾನು ಚುನಾವಣೆಯಲ್ಲಿ ಸೋತಾಗ ಧೈರ್ಯ, ಸಾಂತ್ವನ ಹೇಳಿದ್ದರು. ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಅವರು, ತಾವು ಕೂಡ ರಾಜಕೀಯ ಸವಾಲುಗಳನ್ನು ಎದುರಿಸಿದ್ದ ಬಗ್ಗೆಯೂ ನನಗೆ ತಿಳಿಹೇಳಿ ಚೈತನ್ಯ ಮೂಡಿಸಿದ್ದರು.

    2019ರ ಚುನಾವಣೆಯಲ್ಲಿ ನಾನು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದೆ. ಫಲಿತಾಂಶ ಹೊರಬಿದ್ದ ನಂತರ ನಾನು ಮುಕ್ತ ಮನಸ್ಸಿನಿಂದ ಟ್ವೀಟ್ ಒಂದನ್ನು ಪೋಸ್ಟ್ ಮಾಡಿ, ಅದರಲ್ಲಿ ಕೆಲ ಅಂಶಗಳನ್ನು ಉಲ್ಲೇಖಿಸಿದ್ದೆ. ಆ ಟ್ವೀಟ್ ಗಮನಿಸಿದ್ದ ಶ್ರೀ ಎಸ್.ಎಂ.ಕೃಷ್ಣ ಅವರು, ಅದನ್ನು ರೀ ಟ್ವೀಟ್ ಮಾಡಿದ್ದರು ಹಾಗೂ ಆ ನಂತರ ನನಗೆ ದೂರವಾಣಿ ಕರೆ ಮಾಡಿ, “ನಿನ್ನ ಟ್ವೀಟ್ ನೋಡಿದೆ ನಿಖಿಲ್. ಬಹಳ ಚೆನ್ನಾಗಿದೆ, ಹೃದಯಸ್ಪರ್ಶಿಯಾಗಿ ಬರೆದಿರುವೆ. ಸೋತಾಗ ಈ ರೀತಿ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ತುಂಬಾ ಅಪರೂಪ. ಸೋಲನ್ನು ಒಪ್ಪಿಕೊಳ್ಳುವ ರೀತಿ, ಗೆದ್ದವರನ್ನು ಅಭಿನಂದಿಸುವ ಬಗೆ ಎರಡೂ ಬಹಳ ಮುಖ್ಯ. ನಿನ್ನ ನಡವಳಿಕೆ ಇಷ್ಟವಾಯಿತು. ಇದು ನಿನ್ನ ಉತ್ತಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ. ಧೈರ್ಯವಾಗಿ ಮುನ್ನುಗ್ಗು.. ದೇವರು ಒಳ್ಳೆಯದು ಮಾಡುತ್ತಾನೆ..” ಎಂದು ಹಿತವಚನ ಹೇಳಿದ್ದರು. ಎರಡು-ಮೂರು ನಿಮಿಷಗಳ ಅವರ ಧೈರ್ಯದ ಮಾತುಗಳು ಆವತ್ತು ನನ್ನನ್ನು ಮತ್ತಷ್ಟು ಸದೃಢಗೊಳಿಸಿದ್ದವು. ಪಕ್ಷ ರಾಜಕಾರಣ ಮೀರಿ ಇಂಥ ವ್ಯಕ್ತಿತ್ವ ಮೆರೆಯುವುದು ಎಂದರೆ ಇವತ್ತಿನ ರಾಜಕಾರಣದಲ್ಲಿ ಅಪರೂಪದಲ್ಲಿ ಅಪರೂಪ. ಉದಾರ ವ್ಯಕ್ತಿತ್ವ, ಮಾನವೀಯ ಸಂಬಂಧಗಳಿಗೆ ಶ್ರೀ ಕೃಷ್ಣ ಅವರು ಆದರ್ಶಪ್ರಾಯರಾಗಿದ್ದರು. ಇವತ್ತು ಅವರ ಭೌತಿಕ ಕಾಯದ ಮುಂದೆ ನಿಂತು ಶಿರಬಾಗಿ ನಮಿಸುವಾಗ ನನ್ನಲ್ಲಿ ಆ ಸ್ಮರಣೆಗಳೆಲ್ಲವೂ ಹಾದು ಹೋದವು.

    ಐಟಿ-ಬಿಟಿ ಮೂಲಕ ಬೆಂಗಳೂರು ಮಹಾನಗರಕ್ಕೆ ಬ್ರ್ಯಾಂಡ್ ಇಮೇಜ್ ತಂದುಕೊಟ್ಟವರು ಶ್ರೀ ಎಸ್.ಎಂ.ಕೃಷ್ಣ ಅವರು. ಅನೇಕ ಕಂಪನಿಗಳನ್ನು ಕರೆತಂದು ಉದ್ಯಾನನಗರಿಯನ್ನು ಸಿಲಿಕಾನ್ ವ್ಯಾಲಿ ಮಾಡಿದ್ದು ಕೂಡ ಅವರೇ. ರಾಜ್ಯದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ ಪ್ರಾತಃಸ್ಮರಣೀಯರಲ್ಲಿ ಅವರು ಖಂಡಿತಾ ಒಬ್ಬರು. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿರಬಹುದು, ಅವರು ಬಿಟ್ಟುಹೋದ ಕೊಡುಗೆಗಳು ಅಜರಾಮರ. ಅವು ಎಂದೆಂದೂ ನಮ್ಮೊಂದಿಗೆ ಇರುತ್ತೇವೆ.

    ಶ್ರೀ ಎಸ್.ಎಂ.ಕೃಷ್ಣ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading