ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಕೇರಳದಲ್ಲಿ ನೆರೆ ಸಂತ್ರಸ್ತರಿಗೆ ಗೃಹ ನಿರ್ಮಾಣ ಮಾಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತದಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ ಸರ್ಕಾರ ಕೇರಳದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಭರವಸೆಯನ್ನು ನೀಡಿದೆ. ಈ ವಿಚಾರ ಮಾನವೀಯವಾಗಿ ಮನೆ ನಿರ್ಮಾಣ ಮಾಡುವುದು ಸರಿ ಎಂಬಂತೆ ಕಾಣುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರ ಈ ನಡೆ ನಮಗೆ ಮಾನವೀಯ ನೆಲೆ ಎಂದು ಕಾಣುತ್ತಿಲ್ಲ. ಬದಲಾಗಿ ಇದು ಗುಲಾಮಗಿರಿಯ ಸಂಕೇತ ಎಂದು ಕಾಣುತ್ತಿದೆ. ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅವರು ಸಂಸದರಾಗಿದ್ದು, ಅವರೇ ಆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಟೀಕಿಸಿದರು.
ಈಗಾಗಲೇ ನಮ್ಮ ರಾಜ್ಯದಲ್ಲಿ ಬಾಣಂತಿಯರ ಸಾವು ಸಂಭವಿಸಿದ್ದು, ಎತ್ತಿನಹೊಳೆ ಯೋಜನೆ ಸಂಬಂಧವಾಗಿ ರೈತರು ಅಧಿಕಾರಿಗಳ ಜೊತೆ ವಾದ-ವಿವಾದ ಮಾಡಿ ಹೊಳಗೆ ಹಾರಿ ಸಾವನ್ನಪ್ಪಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ವಯನಾಡು ಬಗ್ಗೆ ಕಳಕಳಿ ವಹಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ನಡೆ ಗುಲಾಮಗಿರಿಯಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.
ಇನ್ನು ಕಾಂಗ್ರೆಸ್ ನಾಯಕರು ಹಾಗೂ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಉತ್ತರ ನೀಡುವಲ್ಲೇ ಕಾರ್ಯನಿರತರಾಗಿದ್ದಾರೆ. ಅಲ್ಲದೇ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಇನ್ನು ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


