ಸ್ಲಿಮ್ ಆಗಿ, ಸುಂದರವಾಗಿ ಕಾಣಬೇಕು ಎಂಬ ಆಸೆ ಈಗಿನ ಕಾಲದ ಯುವತಿಯರಿಗೆ ಹೆಚ್ಚು. ಅಲ್ವಾ? ಅದಕ್ಕಾಗಿಯೇ ಎಲ್ಲರೂ ತೂಕ ಇಳಿಸಲು ಶಾರ್ಟ್‌ಕಟ್‌ಗಳನ್ನು ಹುಡುಕುತ್ತಾ ಇರುತ್ತಾರೆ!
ನೋಡಲು ಸುಲಭ, ಪ್ರಯತ್ನ ಕಡಿಮೆ, ಫಲಿತಾಂಶ ಜಾಸ್ತಿ ಇಂತಹ ವೀಡಿಯೋಗಳಿಂದ ನಮ್ಮ ಸೋಶಿಯಲ್ ಮೀಡಿಯಾಗಳು ತುಂಬಿ ಹೋಗಿವೆ! ಕೆಲವರು ಡಯಟ್ ಮಾಡುತ್ತಾರೆ, ಜ್ಯೂಸ್ ಕುಡಿಯುತ್ತಾರೆ, ಇನ್ನೂ ಕೆಲವರು ವೈದ್ಯರ ಸಲಹೆ ಪಡೆಯದೇ, ಇಂಟರ್ನೆಟ್ ನೋಡಿ ಮನಸ್ಸಿಗೆ ಬಂದಂತೆ ತಿನ್ನುವುದನ್ನು ನಿಲ್ಲಿಸಿಬಿಡುತ್ತಾರೆ.
ಆದರೆ, ಚೀನಾದಲ್ಲಿ ನಡೆದ ಈ ಘಟನೆ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ! ಅಲ್ಲಿನ ಒಬ್ಬ ಯುವತಿ ಈ ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ತಕ್ಷಣವೇ ಸಣ್ಣಗಾಗಲು ಅಪಾಯಕಾರಿ ‘ತೂಕ ಇಳಿಸುವ ಇಂಜೆಕ್ಷನ್’ ತೆಗೆದುಕೊಂಡಿದ್ದಾಳೆ. ಇದರ ಪರಿಣಾಮ ಏನಾಯ್ತು ಗೊತ್ತಾ? ಆಕೆಯ ಆರೋಗ್ಯ ಸಂಪೂರ್ಣವಾಗಿ ಹಾಳಾಗಿದ್ದು, ಜೀವವೇ ಕೈತಪ್ಪುವ ಪರಿಸ್ಥಿತಿಗೆ ತಲುಪಿ ಆಸ್ಪತ್ರೆ ಸೇರಿದ್ದಾಳೆ! ಇದು ತ್ವರಿತ ಫಲಿತಾಂಶ ಬಯಸುವ ಎಲ್ಲರಿಗೂ ಒಂದು ದೊಡ್ಡ ಪಾಠ.
11 ಸಾವಿರ ರೂ. ನೀಡಿ ಅಪಾಯಕ್ಕೆ ಸಿಲುಕಿದ ಚೆನ್!
ಚೀನಾದ 28 ವರ್ಷದ ಮಹಿಳೆ ಚೆನ್ ಎಂಬುವವರು ಈ ದುರ್ಘಟನೆಗೆ ಒಳಗಾದವರು. ಈಕೆ ಜಿಯಾಂಗ್ಸು ಪ್ರಾಂತ್ಯದ ಸುಝೌ ನಿವಾಸಿ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದಂತೆ, ಸ್ನೇಹಿತೆಯ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತೂಕ ಇಳಿಸುವ ಚುಚ್ಚುಮದ್ದಿನ ಜಾಹೀರಾತು ನೋಡಿ ಆಕರ್ಷಿತಳಾಗಿದ್ದಾಳೆ.
ಒಂದು ಇಂಜೆಕ್ಷನ್ ತೆಗೆದುಕೊಂಡರೆ 3.5 ಕೆಜಿ ತೂಕ ಇಳಿಕೆಯ ಖಚಿತ ಭರವಸೆ ನೀಡಲಾಗಿತ್ತು! ಈ ಭರವಸೆ ನಂಬಿದ ಚೆನ್, ಸಂಪೂರ್ಣ ಚಿಕಿತ್ಸಾ ಪ್ಯಾಕೇಜ್‌ನ ಮೂರು ಇಂಜೆಕ್ಷನ್‌ಗಳಿಗಾಗಿ 900 ಯುವಾನ್ (ಸುಮಾರು $130 ಯುಎಸ್ ಡಾಲರ್ ಅಥವಾ ಸುಮಾರು 11,500 ರೂ.) ಪಾವತಿ ಮಾಡಿದ್ದಾರೆ.
ನಾಲ್ಕೇ ದಿನದಲ್ಲಿ 5 ಕೆಜಿ ಇಳಿಕೆ, ನಂತರ ಶುರುವಾಯ್ತು ತೊಂದರೆ!
ಚೆನ್ ಮೊದಲು ಶಿಫಾರಸು ಮಾಡಿದ ಪ್ರಮಾಣದ ಅರ್ಧದಷ್ಟು ಔಷಧಿಯನ್ನು ಮಾತ್ರ ಹೊಕ್ಕಳಿನ ಸುತ್ತ ಇಂಜೆಕ್ಟ್ ಮಾಡಿಕೊಂಡರು. ಆರಂಭದಲ್ಲಿ ವೇಗವಾಗಿ ಫಲಿತಾಂಶ ಸಿಕ್ಕಿತು,ಮೊದಲ ಮೂರು ದಿನಗಳಲ್ಲಿ, ನಾನು ನಿಜವಾಗಿಯೂ ದಿನಕ್ಕೆ ಒಂದು ಕಿಲೋ ಗ್ರಾಂ ತೂಕ ಇಳಿಸಿಕೊಂಡೆ. ಕೇವಲ ನಾಲ್ಕು ದಿನಗಳಲ್ಲಿ ನಾನು ಒಟ್ಟು 5 ಕೆಜಿ ತೂಕ ಇಳಿಸಿಕೊಂಡೆ.
ಆದರೆ ನಂತರದ ದಿನಗಳಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತು,4ನೇ ದಿನ, ನಾನು ಹಸಿರು ಮತ್ತು ಹಳದಿ ದ್ರವಗಳನ್ನು ವಾಂತಿ ಮಾಡಲು ಪ್ರಾರಂಭಿಸಿದೆ. ಆಸ್ಪತ್ರೆಯಲ್ಲಿ, ಅದು ಪಿತ್ತರಸದ ಸಮಸ್ಯೆ ಎಂದರು, ಆದರೆ ನನ್ನ ಹೊಟ್ಟೆಯ ಒಳಪದರವು (lining of stomach) ಈಗಾಗಲೇ ಸುಟ್ಟುಹೋಗಿತ್ತು.
ರಕ್ತ ವಾಂತಿ, ನಾಡಿ ಮಿಡಿತ ಸ್ಥಗಿತ!
ಆತಂಕಕಾರಿ ವಿಚಾರವೆಂದರೆ, ಆಸ್ಪತ್ರೆಯಲ್ಲಿ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ತೆಗೆಯುವಾಗ ಚೆನ್ ಇದ್ದಕ್ಕಿದ್ದಂತೆ ರಕ್ತ ವಾಂತಿ ಮಾಡಿಕೊಂಡಿದ್ದಾರೆ.
ನನ್ನ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣ ಹಾನಿಗೊಳಗಾಗಿತ್ತು ಮತ್ತು ಈಗಾಗಲೇ ರಕ್ತಸ್ರಾವವಾಗುತ್ತಿತ್ತು. ಆ ಸಮಯದಲ್ಲಿ, ನನ್ನ ನಾಡಿಮಿಡಿತ (pulse) ನಿಂತುಹೋಗಿತ್ತು. ಪ್ರಜ್ಞೆ ಮರಳಿದ ನಂತರವೇ ನನಗೆ ಚಿಕಿತ್ಸೆಗಳ ಬಗ್ಗೆ ತಿಳಿಯಿತು. ನನ್ನ ಬಾಯ್‌ಫ್ರೆಂಡ್ ನಾನು ಬಹಳ ಗಂಭೀರ ಸ್ಥಿತಿಗೆ ಬಂದಿದ್ದೆ ಎಂದು ಹೇಳಿದರು.ಚಿಕಿತ್ಸೆಯ ನಂತರ ಪ್ರಜ್ಞೆ ಬಂದಾಗ, ತನ್ನ ಜೀವ ಎಷ್ಟು ಅಪಾಯಕ್ಕೆ ತಳ್ಳಿಕೊಂಡಿದ್ದೆ ಎಂಬುದು ಚೆನ್‌ರಿಗೆ ಗೊತ್ತಾಯಿತು. ವೈದ್ಯರು ಒಂದು ವರ್ಷ ಗರ್ಭಿಣಿಯಾಗಬಾರದೆಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಇಂಜೆಕ್ಷನ್‌ನಲ್ಲಿ ಅಕ್ರಮ ‘ಸೆಮಾಗ್ಲುಟೈಡ್’!
ತನಿಖೆ ನಡೆಸಿದಾಗ ಆಘಾತಕಾರಿ ಸತ್ಯ ಹೊರಬಿದ್ದಿದೆ ಈ ತೂಕ ಇಳಿಸುವ ಚುಚ್ಚುಮದ್ದುಗಳು ಅನಿಯಂತ್ರಿತವಾಗಿವೆ ಮತ್ತು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಬಳಸಲು ಸಾಧ್ಯವಿಲ್ಲದ ‘ಸೆಮಾಗ್ಲುಟೈಡ್’ (Semaglutide) ಎಂಬ ರಾಸಾಯನಿಕವನ್ನು ಅಕ್ರಮವಾಗಿ ಇದರಲ್ಲಿ ಸೇರಿಸಲಾಗಿತ್ತು!
ಫಾಸ್ಟ್ ರಿಸಲ್ಟ್‌ಗಾಗಿ ಮಾಡಿದ ಒಂದು ತಪ್ಪು ಹೆಜ್ಜೆ ಜೀವವನ್ನೇ ಅಪಾಯಕ್ಕೆ ತಳ್ಳಬಹುದು.ತೂಕ ಇಳಿಸಲು ಯಾವ ಉತ್ಪನ್ನವಾದರೂ ವೈದ್ಯರ ಸಲಹೆಯಿಲ್ಲದೆ ಬಳಸಬೇಡಿ.ಸೋಶಿಯಲ್ ಮೀಡಿಯಾ ಭರವಸೆಗಳು ಬಹುಪಾಲು ಸುಳ್ಳು.ದಪ್ಪವಾಗಿರುವುದು ಸಮಸ್ಯೆ ಅಲ್ಲ ಅನಾರೋಗ್ಯವೇ ನಿಜವಾದ ಸಮಸ್ಯೆ.
ಯೂರಿಕ್ ಆಮ್ಲ ಜಾಸ್ತಿಯಾಗಿದೆಯೇ? ನಿಮ್ಮ ಆಹಾರಕ್ರಮ ಹೀಗಿರಲಿ: ಏನು ತಿನ್ನಬೇಕು, ಏನನ್ನು ತ್ಯಜಿಸಬೇಕು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


