Friday, November 6, 2026
spot_img
More
    spot_img
    HomeLatest newsಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್‌ಗೆ ಬಡ್ತಿ, ವರ್ಗಾವಣೆ

    ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್‌ಗೆ ಬಡ್ತಿ, ವರ್ಗಾವಣೆ

    ಕರ್ನಾಟಕ ಸರ್ಕಾರ 1994ನೇ ಬ್ಯಾಚ್ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಬಡ್ತಿಯನ್ನು ನೀಡಿ ಆದೇಶಿಸಿದೆ. ಬಡ್ತಿ ತಡೆ ಹಿಡಿದಿದ್ದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಅಲೋಕ್ ಕುಮಾರ್ ಬಡ್ತಿ ಪಡೆದಿದ್ದಾರೆ, ವರ್ಗಾವಣೆಗೊಂಡಿದ್ದಾರೆ.

    ಪೊಲೀಸ್ ತರಬೇತಿ ಕೇಂದ್ರದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ(ಎಡಿಜಿಪಿ) ಅಲೋಕ್ ಕುಮಾರ್ ಅವರನ್ನು ಡಿಜಿಪಿ ಹುದ್ದೆಗೆ ಪದೋನ್ನತಿ ಮಾಡಿ ಸರ್ಕಾರ ಆದೇಶಿಸಿದೆ. 12/9/2025ರಿಂದ ಈ ಆದೇಶ ಜಾರಿಗೆ ಬರುತ್ತದೆ ಎಂದು ಸರ್ಕಾರ ಆದೇಶದಲ್ಲಿ ಹೇಳಿದೆ.

    ಅಲೋಕ್ ಕುಮಾರ್ ಅವರಿಗೆ ಬಡ್ತಿ ನೀಡಿರುವ ಸರ್ಕಾರ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ವರ್ಗಾವಣೆ ಮಾಡಿದೆ. ಈ ಹುದ್ದೆಯಲ್ಲಿದ್ದ ಮಾಲಿನಿ ಕೃಷ್ಣಮೂರ್ತಿ ಅವರ ನಿವೃತ್ತಿ ಬಳಿಕ ಹುದ್ದೆ ಖಾಲಿ ಇತ್ತು.

    2019ರಲ್ಲಿ ಕರ್ನಾಟಕದಲ್ಲಿ ನಡೆದ ಫೋನ್ ಕದ್ದಾಲಿಕೆ ಹಗರಣದಲ್ಲಿ ಅಲೋಕ್ ಕುಮಾರ್ ಸೇರಿ ಹಲವು ಅಧಿಕಾರಿಗಳ ವಿರುದ್ಧ ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಿತ್ತು. ಈ ಹಗರಣ ನಡೆದ ವೇಲೆ ಅಲೋಕ್ ಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು.

    ಅಲೋಕ್ ಕುಮಾರ್ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದ ಕಾರಣಕ್ಕೆ ಅವರ ಬಡ್ತಿಗೆ ತಡೆ ನೀಡಲಾಗಿತ್ತು. ಸಿಬಿಐ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಬಿ-ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಆದರೆ ಕರ್ನಾಟಕ ಸರ್ಕಾರ 2025ರ ಮೇ ತಿಂಗಳಿನಲ್ಲಿ ಇಲಾಖಾ ತನಿಖೆಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ಅಲೋಕ್ ಕುಮಾರ್ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದರು.

    ಅರ್ಜಿಯ ವಿಚಾರಣೆ ನಡೆಸಿದ್ದ ಸಿಎಟಿ ರಾಜ್ಯ ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಿದ್ದ  ಆದೇಶವನ್ನು ರದ್ದುಗೊಳಿಸಿತ್ತು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅಲೋಕ್ ಕುಮಾರ್ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದರು. ಸಿಎಟಿ ಆದೇಶ ಬಳಿಕ ಕರ್ನಾಟಕ ಸರ್ಕಾರ ಈಗ ಅಲೋಕ್ ಕುಮಾರ್‌ಗೆ ಬಡ್ತಿ ನೀಡಿದೆ.

    ಒಂದಂಕಿ ಲಾಟರಿ ಹಗರಣದಲ್ಲಿಯೂ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹೆಸರು ಕೇಳಿ ಬಂದಿತ್ತು. ಈ ಹಗರಣದ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪದ ಹಿನ್ನಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಬಳಿಕ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿತ್ತು.

    2015ರಲ್ಲಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಒಂದಂಕಿ ಲಾಟರಿ ಪ್ರಕರಣದ ಪ್ರಮುಖ ಆರೋಪಿ ಪಾರಿರಾಜನ್ ಜೊತೆ ಅಲೋಕ್ ಕುಮಾರ್ ಸಂಪರ್ಕವಿಟ್ಟುಕೊಂಡಿದ್ದಾರೆ ಎಂದು ಅವರನ್ನು ಅಮಾತನು ಮಾಡಲಾಗಿತ್ತು, ಈ ಕುರಿತು ಸಿಐಡಿ ತನಿಖೆ ನಡೆದು ವರದಿ ಬಂದ ಬಳಿಕ ಅಮಾನತು ಆದೇಶ ಹಿಂಪಡೆಯಲಾಗಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ, ಜನಪ್ರಿಯವಾಗಿರುವ ಮತ್ತು ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅಲೋಕ್ ಕುಮಾರ್ ಹಲವಾರು ಆರೋಪಗಳನ್ನು ಎದುರಿಸಿದ್ದಾರೆ.

    • 2019ರಲ್ಲಿ ಅಲೋಕ್‌ ಕುಮಾರ್‌ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು. ಆಗ 50 ವರ್ಷದ ಮಹಿಳೆಯೊಬ್ಬರು ಕಚೇರಿಗೆ ಹೋದ ತಾವು ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಅಲೋಕ್‌ ಕುಮಾರ್ ತಮ್ಮ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು.
    • ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ 2015ರ ಮೇ 30ರಂದು ನಡೆದಿದ್ದ ಗಲಾಟೆ ಪ್ರಕರಣ ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿಗಳ ಮೂಲಕ 1 ಕೋಟಿ ಲಂಚಕ್ಕೆ ಅಲೋಕ್ ಕುಮಾರ್ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ತನಿಖೆ ಬಳಿಕ ಲೋಕಾಯುಕ್ತ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರು.
    • 2019ರ ಆಗಸ್ಟ್ 2ರಂದು ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಗಿತ್ತು. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಅಲೋಕ್ ಕುಮಾರ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.  ಅಲೋಕ್ ಕುಮಾರ್ ವಿರುದ್ಧ ದಾಖಲಾಗಿದ್ದ ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದು ಬಿ-ರಿಪೋರ್ಟ್ ಸಲ್ಲಿಕೆಯಾಗಿತ್ತು.

    ಬಿ.ದಯಾನಂದ ವರ್ಗಾವಣೆ: 1994ನೇ ಬ್ಯಾಚ್ ಐಪಿಎಸ್ ಅಧಿಕಾರಿ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಬಿ.ದಯಾನಂದ ಅವರನ್ನು ಕರ್ನಾಟಕ ಸರ್ಕಾರ ವರ್ಗಾವಣೆ ಮಾಡಿದೆ. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಅವರನ್ನು ಎಡಿಜಿಪಿ ಪೊಲೀಸ್ ತರಬೇತಿ, ಬೆಂಗಳೂರು ಹುದ್ದೆಗೆ ನೇಮಕ ಮಾಡಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search