ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ 117 ಅಂಗನವಾಡಿ ಕಾರ್ಯಕರ್ತೆ ಹಾಗೂ 829 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 9/1/2026 ಕೊನೆಯ ದಿನವಾಗಿದೆ.
ಗೌರವಧನದ ಆಧಾರದ ಮೇಲೆ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರದ ಅದೇಶ ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯ ಪರಿಷ್ಕೃತ ಮಾರ್ಗಸೂಚಿಯಂತೆ ಮಾನ್ಯ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ ಇವರ ಅನುಮೋದನೆಯಂತೆ ತುಮಕೂರು ಜಿಲ್ಲೆಯ 11 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಚಿಕ್ಕನಾಯಕನಹಳ್ಳಿ 10, ಗುಬ್ಬಿ 10, ಕೊರಟಗೆರೆ 12, ಕುಣಿಗಲ್ 8, ಮಧುಗಿರಿ 12, ಪಾವಗಡ 7, ಶಿರಾ 26, ತಿಪಟೂರು 10, ತುಮಕೂರು ಗ್ರಾಮಾಂತರ 12, ತುಮಕೂರು ನಗರ 5, ತುರುವೇಕೆರೆ 5 ಒಟ್ಟು 117.
ಅಂಗನವಾಡಿ ಸಹಾಯಕಿ ಹುದ್ದೆಗಳು ಚಿಕ್ಕನಾಯಕನಹಳ್ಳಿ 61, ಗುಬ್ಬಿ 118, ಕೊರಟಗೆರೆ 89, ಕುಣಿಗಲ್ 68, ಮಧುಗಿರಿ 79, ಪಾವಗಡ 51, ಶಿರಾ 103, ತಿಪಟೂರು 54, ತುಮಕೂರು ಗ್ರಾಮಾಂತರ 109, ತುಮಕೂರು ನಗರ 22, ತುರುವೇಕೆರೆ 75 ಒಟ್ಟು 829.
ಸೂಚನೆಗಳು
1. ಅಂಗನವಾಡಿ ಕಾರ್ಯಕರ್ತ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್‌ಲೈನ್ (Online)ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
2. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನೇಮಕಾತಿಯ ಮಾರ್ಗಸೂಚಿ ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊಂಡು ನೀಡಲಾಗಿರುವ ಸೂಚನೆಯಂತೆ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯಕ ದೃಢೀಕೃತ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸುವುದು ಹಾಗೂ ಡಿಜಿ ಲಾಕರ್ ಬಳಸಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
3. ಆನ್‌ಲೈನ್ ಮೂಲಕವೇ ಎಲ್ಲ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದು. ತದನಂತರ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ 09-01-2026ಕ್ಕೆ 19 ವರ್ಷ ಪೂರ್ಣಗೊಂಡಿರಬೇಕು ಹಾಗೂ 35 ವರ್ಷ ಮೀರಿರಬಾರದು ಹಾಗೂ ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಯು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ತೇರ್ಗಡೆ, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ ಮುಕ್ತ ವಿದ್ಯಾಲಯಗಳಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಪ್ರಥಮ/ ದ್ವಿತೀಯ ಭಾಷೆಯಾಗಿ ಕನ್ನಡ ಹಾಗೂ ಸಾಮಾನ್ಯ ಗಣಿತ ಮತ್ತು ಸಮಾಜ ಶಾಸ್ತ್ರ/ ಸಮಾಜ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು, ಪ್ರಮಾಣ ಪತ್ರ/ ಅಂಕಪಟ್ಟಿಯು ಗರಿಷ್ಠ 525 ಕನಿಷ್ಠ 219 ಅಂಕಗಳನ್ನು ಹೊಂದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.
ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದು, ಕನ್ನಡವನ್ನು ಪ್ರಥಮ/ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ್ದರೂ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಆ ರಾಜ್ಯದಲ್ಲಿ ನಿಗದಿಪಡಿಸಿದ ಗರಿಷ್ಟ ಹಂಗೂ ಕನಿಷ್ಟ ಅಂಗಳು ಹಾಗೂ ರಾಜ್ಯದಲ್ಲಿ ನಿಗಧಿಪಡಿಸಿದ ಕನಿಷ್ಠ ಅಂಕದಲ್ಲಿ ವ್ಯತ್ಯಾಸವಿದ್ದಲ್ಲಿ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಅಂಗನವಾಡಿ ಸಹಾಯಕಿಯರು ಯಾವುದೇ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೂ ಹಾಗೂ ಯಾವುದೇ ರಾಜ್ಯದಲ್ಲಿ ವ್ಯಾಸಂಗ ಮಾಡಿದ್ದರೂ ಸಹಾ ಅವರು ಕನ್ನಡ ಭಾಷೆಯನ್ನು ಪ್ರಥಮ/ ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡಿರಬೇಕು ಹಾಗೂ ಮಾತೃಭಾಷೆ ಕನ್ನಡವಲ್ಲದೇ ಇರುವ ಅಭ್ಯರ್ಥಿಗಳಿಗೆ ಆಯ್ಕೆ ಸಮಿತಿಯು ಆಯ್ಕೆ ಸಮಯದಲ್ಲಿ ಸಂದರ್ಶನ ಏರ್ಪಡಿಸಿ ಹಾಗೂ ಅವಶ್ಯವಿದ್ದಲ್ಲಿ ಕನ್ನಡ ಭಾಷೆಯ ಜ್ಞಾನದ ಕುರಿತಂತೆ ಓದಿಸಿ, ಬರೆಸಿ ಅವರ ಕನ್ನಡ ಭಾಷಾ ಜ್ಞಾನವನ್ನು ಪರೀಕ್ಷಿಸಿ ಅವರನ್ನು ಆಯ್ಕೆ ಮಾಡುವ ಬಗ್ಗೆ ಸಮಿತಿಯವರು ನಿರ್ಧರಿಸುವರು.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಇಲಾಖಾ ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಸರ್ಕಾರದ ಆದೇಶ ದಿನಾಂಕ:03-12-2022 ಮತ್ತು ದಿನಾಂಕ: 18-11-2024 ರಲ್ಲಿ ತಿಳಿಸಿರುವ ಮಾರ್ಗಸೂಚಿಯ ಮಾನದಂಡದ ಪ್ರಕಾರ ನೇಮಕಾತಿ ಮಾಡಲಾಗುವುದು.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ https://karnemakaone.kar.nic.in/abcd/. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


