ಕೇಂದ್ರ ಸರ್ಕಾರ ನವದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದೆ. ಎರಡು ಎಫ್‌ಐಆರ್ ದಾಖಲು ಮಾಡಿಕೊಂಡು ಇದನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.
ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೆಂಪು ಕೋಟೆ ಸಮೀಪ ನಡೆದ ಸ್ಪೋಟ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಿದೆ. 10 ಸದಸ್ಯರ ತಂಡ ಇದಾಗಿದ್ದು, ಈ ತಂಡ ಕಾರು ಸ್ಪೋಟ ಪ್ರಕರಣದ ಕುರಿತು ಮಾತ್ರ ತನಿಖೆಯನ್ನು ನಡೆಸಲಿದೆ.
ಕಾರು ಸ್ಪೋಟ ಪ್ರಕರಣ, ಫರಿದಾಬಾದ್‌ನಲ್ಲಿ ಅಪಾರ ಸ್ಫೋಟಕ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಇದನ್ನು ವಿಶೇಷ ಕೇಸ್ ಎಂದು ಪರಿಗಣಿಸಿ ಎನ್‌ಐಎ ವಿಶೇಷ ತಂಡವನ್ನು ತನಿಖೆಗಾಗಿ ರಚನೆ ಮಾಡಿದೆ.
ಈ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಾಗಿಯಾಗಿರುವ ಶಂಕೆ ಇದೆ. ಆದ್ದರಿಂದ ತನಿಖೆಗಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಈ ತಂಡವನ್ನು ಎಡಿಜಿ ವಿಜಯ್ ಸಾಕರೆ ಮುನ್ನಡೆಸಲಿದ್ದಾರೆ.
ಮೊದಲು ದೆಹಲಿ ಪೊಲೀಸರು ಸ್ಫೋಟ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಎನ್‌ಐಎ ತನಿಖೆ ಕೈಗೊಂಡಿದ್ದು, ಈಗ 10 ಸದಸ್ಯರ ವಿಶೇಷ ತನಿಖಾ ತಂಡ ರಚಿಸಿದೆ. ಎಡಿಜಿ ವಿಜಯ ಸಾಕರೆ ನೇತೃತ್ವದ ಈ ತಂಡದಲ್ಲಿ ಒಬ್ಬ ಐಜಿಪಿ, ಇಬ್ಬರು ಡಿಐಜಿಗಳು, ಮೂವರು ಎಸ್ಪಿಗಳು ಹಾಗೂ ಡಿಎಸ್‌ಪಿ ಹುದ್ದೆಯ ಅಧಿಕಾರಿಗಳು ಇದ್ದಾರೆ.
ಈ ತಂಡವು ಬಹುರಾಜ್ಯದಲ್ಲಿ ಸಂಪರ್ಕ ಹೊಂದಿರುವ ಜೈಶ್-ಎ-ಮೊಹಮ್ಮದ್ ಜಾಲವನ್ನು ಪತ್ತೆ ಮಾಡಿ, ತನಿಖೆಗೊಳಪಡಿಸುತ್ತದೆ. ಸದ್ಯದ ಮಾಹಿತಿ ಪ್ರಕಾರ ದೆಹಲಿಯಲ್ಲಿ 4 ಸ್ಥಳಗಳನ್ನು ಟಾರ್ಗೆಟ್ ಮಾಡಲಾಗಿತ್ತು. ಆದರೆ ಕಾರು ರಸ್ತೆಯಲ್ಲಿರುವಾಗಲೇ ಸ್ಫೋಟಗೊಂಡಿದೆ. ಇದು ಆಕಸ್ಮಿಕವೋ?, ಆತ್ಮಾಹುತಿ ದಾಳಿಯೋ? ಎಂದು ಇನ್ನೂ ತನಿಖೆ ನಡೆಯುತ್ತಿದೆ.
ಜೈಶ್-ಎ-ಮೊಹಮ್ಮದ್ ಉಗ್ರರ ಸಂಪರ್ಕಗಳ ಬಗ್ಗೆ ಎನ್‌ಐಎ ತನಿಖೆ ಮಾಡಲಿದೆ. ಈ ಉದ್ದೇಶಕ್ಕಾಗಿ 10 ಸದಸ್ಯರ ವಿಶೇಷ ತಂಡ ರಚಿಸಲಾಗಿದೆ. ಈ ತಂಡದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಇದ್ದಾರೆ ಮತ್ತು ಈ ತಂಡವು ಈ ಭಯೋತ್ಪಾದನೆ ಜಾಲದ ಪ್ರತಿಯೊಂದು ಅಂಶದ ಕುರಿತು ತನಿಖೆ ನಡೆಸಲಿದೆ.
ಸದ್ಯದ ಮಾಹಿತಿಯಂತೆ ದೆಹಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಡಾ.ಉಮರ್ ನಬಿ. ಈತನೇ ಕಾರನ್ನು ಚಲಾಯಿಸುತ್ತಿದ್ದ ಎಂಬ ಮಾಹಿತಿ ಇದೆ. ಸ್ಪೋಟದ ಬಳಿಕ ಈತನ ಕೈ ಕಟ್ ಆಗಿದ್ದು, ರಸ್ತೆಯಲ್ಲಿ ಬಂದು ಬಿದ್ದಿತ್ತು. ಈ ಕೈ ಯಾರದ್ದು? ಎಂದು ತಿಳಿಯಲು ಈಗ ಡಾ.ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ತಯಾರಿ ನಡೆಸಿದ್ದಾರೆ.
ಪುಲ್ವಾಮಾದಲ್ಲಿರುವ ಡಾ.ಉಮರ್ ನಬಿ ತಾಯಿ ಮತ್ತು ಸಹೋದರನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಡಾ.ಉಮರ್ ನಬಿ ಮನೆಯವರ ಜೊತೆ 2 ದಿನದಿಂದ ಸಂಪರ್ಕದಲ್ಲಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಆತನ ಒಂದು ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು.
ಸ್ಪೋಟಗೊಂಡ ಐ-20 ಕಾರು ಗುರುಗ್ರಾಮದಲ್ಲಿ ನೋಂದಣಿಯಾಗಿತ್ತು. ಈಗಾಗಲೇ ಕಾರಿನ ಮಾಲೀಕರನ್ನು ಪತ್ತೆ ಹಚ್ಚಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಪ್ರಕರಣದ ತನಿಖೆಗಾಗಿ ಶ್ರೀನಗರಕ್ಕೆ ವಿಶೇಷ ತಂಡವನ್ನು ಕಳಿಸಲಾಗಿದೆ.
ಸ್ಫೋಟ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಂಗ್ರಹ ಮಾಡಿದ ವಸ್ತುಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಇಂದು ಸಂಜೆ ಪ್ರಾಥವಿಕ ವರದಿ ತನಿಖಾ ತಂಡದ ಕೈ ಸೇರುವ ನಿರೀಕ್ಷೆ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


