ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ಬಸ್‌ಗಳ ಪ್ರಯಾಣಿಕರಿಗೆ ನಂದಿನಿ ಉತ್ಪನ್ನಗಳನ್ನು ವಿತರಣೆ ಮಾಡುವ ಯೋಜನೆಗೆ ಚಾಲನೆ ನೀಡಿದೆ. ಅಲ್ಲದೇ ಬೆಂಗಳೂರು-ದಾವಣಗೆರೆ ನಡುವೆ ಫ್ಲೈ ಬಸ್ ಸೇವೆಯನ್ನು ಆರಂಭಿಸಲಾಗಿದೆ.
ಬುಧವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಎರಡು ಯೋಜನೆಗೆ ಚಾಲನೆ ನೀಡಿದರು. ಬೆಂಗಳೂರು ಏರ್‌ಪೋರ್ಟ್‌ಗೆ ಸಂಚಾರ ನಡೆಸುವ ಕೆಎಸ್ಆರ್‌ಟಿಸಿಯ ಫ್ಲೈಬಸ್ (Flybus)ನಲ್ಲಿ ಪ್ರಯಾಣಿಕರಿಗೆ ನಂದಿನಿ ಉತ್ಪನ್ನಗಳನ್ನು ನೀಡಲಾಗುತ್ತದೆ.
ಸಚಿವರು ಇದೇ ವೇಳೆ ಮಧ್ಯ ಕರ್ನಾಟಕದ ದಾವಣಗೆರೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಸಂಪರ್ಕಿಸುವ ಫ್ಲೈ ಬಸ್ ಸೇವೆಗೆ ಚಾಲನೆ ನೀಡಿದರು. ಕೆಎಸ್ಆರ್‌ಟಿಸಿ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಫ್ಲೈ ಬಸ್ ಸೇವೆಯನ್ನು ಓಡಿಸುತ್ತಿದೆ.
ಬಸ್ ವೇಳಾಪಟ್ಟಿ, ದರ: ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು-ದಾವಣಗೆರೆ ಫ್ಲೈ ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಬಸ್ ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕೆಎಸ್ಆರ್‌ಟಿಸಿ ಫ್ಲೈ ಬಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 00.45 ಗಂಟೆಗೆ ಬಿಡಲಿದ್ದು, ದಾವಣಗೆರೆಗೆ 05.45ಕ್ಕೆ ತಲುಪಲಿದೆ. ಮತ್ತೊಂದು ಬಸ್ 10.00 ಗಂಟೆಗೆ ಹೊರಟು 15.00ಕ್ಕೆ ದಾವಣಗೆರೆ ತಲುಪುತ್ತದೆ.
ದಾವಣಗೆರೆ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ ಬಸ್ ದಾವಣಗೆರೆಯಿಂದ 08.00ಕ್ಕೆ ಹೊರಟು ಏರ್‌ಪೋರ್ಟ್‌ಗೆ 13.00 ಗಂಟೆಗೆ ತಲುಪುತ್ತದೆ. ಮತ್ತೊಂದು ಬಸ್ 17.00ಕ್ಕೆ ಹೊರಟು, 22.00ಕ್ಕೆ ತಲುಪುತ್ತದೆ.
ಈ ಫ್ಲೈ ಬಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸ್ಯಾಟಲೈಟ್ ರಿಂಗ್ ರೋಡ್, ದೊಡ್ಡಬಳ್ಳಾಪುರ ಬೈಪಾಸ್, ದಾಬಸ್‌ಪೇಟೆ, ತುಮಕೂರು ಬೈಪಾಸ್, ಚಿತ್ರದುರ್ಗ ಬೈಪಾಸ್, ದಾವಣಗೆರೆ ತಲುಪಲಿದೆ. ಬಸ್‌ಗೆ ತುಮಕೂರ ಬೈಪಾಸ್, ಚಿತ್ರದುರ್ಗ ಬೈಪಾಸ್‌ನಲ್ಲಿ ಪಿಕಪ್ ಮತ್ತು ಡ್ರಾಪ್ ಪಾಯಿಂಟ್‌ಗಳಿವೆ.
ಈ ಬಸ್‌ನಲ್ಲಿ ಸಂಚಾರವನ್ನು ನಡೆಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು-ತುಮಕೂರು 400 ರೂ., ಏರ್‌ಪೋರ್ಟ್-ಚಿತ್ರದುರ್ಗ 980 ರೂ. ಮತ್ತು ಏರ್‌ಪೋರ್ಟ್-ದಾವಣಗೆರೆ 1,250 ರೂ. ದರವನ್ನು ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ, ಟಿಕೆಟ್ ಬುಕ್ ಮಾಡಲು ಕೆಎಸ್ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಕೆಎಸ್ಆರ್‌ಟಿಸಿಯ ಎಲ್ಲಾ ಫ್ಲೈಬಸ್‌ಗಳಲ್ಲಿ ಪ್ರಯಾಣಿಕರಿಗೆ ನಂದಿನಿ ಉತ್ಪನ್ನಗಳ ಸಿಹಿತಿನಿಸು, ತಂಪು ಪಾನೀಯಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯವನ್ನು ನೀಡಲು ಮತ್ತು ಪ್ರೀಮಿಯಂ ಇಂಟರ್‌ಸಿಟಿ ವಿಮಾನ ನಿಲ್ದಾಣ ಸೇವೆಯಲ್ಲಿ ವಿಮಾನದಂತಹ ಪ್ರಯಾಣದ ಅನುಭವವನ್ನು ಒದಗಿಸಲು ಸಹಾಯಕವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯಾಣಿಕ ಸ್ನೇಹಿ ವಿವಿಧ ಯೋಜನೆಗಳ ಭಾಗವಾಗಿ ಕೆಎಂಎಫ್‌ನ ಡೈರಿ ತಿನಿಸು ಮತ್ತು ಪಾನೀಯಗಳನ್ನು ಒದಗಿಸುವ ಮೂಲಕ ರಾಜ್ಯದ ನಂದಿನಿ ಬ್ರ್ಯಾಂಡ್ ಅನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಿಂದ ಮೈಸೂರು, ಕೇರಳ, ಕೊಡಗು ಸೇರಿದಂತೆ ವಿವಿಧ ಮಾರ್ಗದಲ್ಲಿ ಫ್ಲೈ ಬಸ್ ಸೇವೆ ಇದೆ. ಐಷಾರಾಮಿ ಬಸ್ ಅನ್ನು ಈ ಸೇವೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


