ಬೆಂಗಳೂರು ನಗರದ ನಮ್ಮ ಮೆಟ್ರೋ ರೈಲು ಸಂಚಾರ ವಿಳಂಬವಾಗಿದೆ. ಈ ಕುರಿತು ಬಿಎಂಆರ್‌ಸಿಎಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ. ಹಳದಿ ಮಾರ್ಗದ ಒಂದು ರೈಲಿನಲ್ಲಿ ತಾಂತ್ರಿಕ ತೊಂದರೆ ಉಂಟಾದ ಕಾರಣದಿಂದ ತೊಂದರೆಯಾಗಿದೆ.
ರೈಲು ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ಪ್ರಯಾಣಿಕರ ಮಾಹಿತಿಗಾಗಿ ತಿಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಪೋಸ್ಟ್ ಹಾಕಿದೆ.
ಆಗಸ್ಟ್ 11ರಂದು ಹಳದಿ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಸದ್ಯ 5 ರೈಲುಗಳು ಸಂಚಾರವನ್ನು ನಡೆಸುತ್ತಿವೆ.
ಬುಧವಾರ ಬೆಳಗ್ಗೆ ಮಾರ್ಗದ 1 ರೈಲಿನಲ್ಲಿ ತಾಂತ್ರಿಕ ತೊಂದರೆ ಕಾರಣ ರೈಲು ಸಂಚಾರ ವಿಳಂಬವಾಗಿದೆ. ಆದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಮೆಟ್ರೋ ತಾಂತ್ರಿಕ ಸಮಸ್ಯೆಗಳು ಸರಿ ಹೋದ ಬಳಿಕ ಪುನಃ ಬಿಎಂಆರ್‌ಸಿಎಲ್ ಈ ಕುರಿತು ಮಾಹಿತಿಯನ್ನು ನೀಡಲಿದೆ.
ನಗರದಲ್ಲಿ ಹಳದಿ, ಹಸಿರು ಮತ್ತು ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತವೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದಿನಂತೆ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ.

5ನೇ ರೈಲು ಸಂಚಾರ ಆರಂಭ: ಹಳದಿ ಮಾರ್ಗದಲ್ಲಿ ನವೆಂಬರ್ 1ರಿಂದ 5ನೇ ರೈಲು ಸಂಚಾರವನ್ನು ಆರಂಭಿಸಿತ್ತು. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ದಿನಾಂಕ 1ನೇ ನವೆಂಬರ್ 2025 ರಿಂದ ಹಳದಿ ಮಾರ್ಗದಲ್ಲಿ 5ನೇ ಮೆಟ್ರೋ ರೈಲು ವಾಣಿಜ್ಯ ಸೇವೆ ಆರಂಭಿಸಲಿದೆ.
ಈ ಹೊಸ ರೈಲಿನ ಚಾಲನೆಯಿಂದ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯಲ್ಲಿ ರೈಲುಗಳ ಆವರ್ತನವು ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುತ್ತವೆ. (ಪ್ರಸಕ್ತ 19 ನಿಮಿಷಗಳ ಅಂತರದ ಬದಲಾಗಿ). ಇದರಿಂದ ಪ್ರಯಾಣಿಕರಿಗೆ ಕಡಿಮೆ ಅವಧಿಯಲ್ಲಿ ಸುಗಮ ಮತ್ತು ನಿರಂತರ ಸೇವೆ ನೀಡಲು ಸಹಾಯಕವಾಗಲಿದೆ. ಈ ಬದಲಾವಣೆ ಎಲ್ಲಾ ದಿನಗಳಿಗೆ ಅನ್ವಯವಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿತ್ತು.
ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ಸಂಚಾರ ನಡೆಸಬಹುದು ಎಂದು ತಿಳಿಸಿತ್ತು.
ನಮ್ಮ ಮೆಟ್ರೋ ಹಳದಿ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳು ಸಂಚಾರವನ್ನು ನಡೆಸುತ್ತಾರೆ. ಪ್ರತಿನಿತ್ಯ 80 ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡುತ್ತಾರೆ.
ರೈಲುಗಳ ಕೊರತೆ ಕಾರಣ ಈ ಮಾರ್ಗದಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಈ ಮಾರ್ಗದಲ್ಲಿ ಒಟ್ಟು 15 ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. 2026ರಲ್ಲಿ ಇನ್ನಷ್ಟು ರೈಲುಗಳು ನಗರಕ್ಕೆ ಬರಲಿದ್ದು, ಆಗ ಮಾರ್ಗದಲ್ಲಿ ರೈಲುಗಳ ಸಂಖ್ಯೆಯೂ ಹೆಚ್ಚಾಗಲಿದೆ.
ಹಳದಿ ಮಾರ್ಗದಲ್ಲಿ ರೈಲುಗಳಲ್ಲಿ ಆಗಮಿಸಿ ಆರ್.ವಿ.ರಸ್ತೆಯಲ್ಲಿ ಹಸಿರು ಮಾರ್ಗಕ್ಕೆ ಬದಲಾವಣೆ ಹೊಂದಬಹುದು. ಅಲ್ಲಿಂದ ನಾಗಸಂದ್ರ, ರೇಷ್ಮೆ ಸಂಸ್ಥೆ ಕಡೆಗೆ ಸಂಚಾರವನ್ನು ನಡೆಸಬಹುದಾಗಿದೆ.
ನಿಲ್ದಾಣಗಳು
- ಬೊಮ್ಮಸಂದ್ರ (ಡೆಲ್ಟಾ ಎಲೆಕ್ಟ್ರಾನಿಕ್ಸ್)
- ಹೆಬ್ಬಗೋಡಿ
- ಹುಸ್ಕೂರು ರಸ್ತೆ
- ಇನ್ಫೋಸಿಸ್ ಫೌಂಡೇಷನ್
- ಎಲೆಕ್ಟ್ರಾನಿಕ್ ಸಿಟಿ
- ಬೆರಟೇನ ಅಗ್ರಹಾರ
- ಹೊಸ ರಸ್ತೆ
- ಸಿಂಗಸಂದ್ರ
- ಕೂಡ್ಲುಗೇಟ್
- ಹೊಂಗಸಂದ್ರ
- ಬೊಮ್ಮನಹಳ್ಳಿ
- ಸೆಂಟ್ರಲ್ ಸಿಲ್ಕ್ ಬೋರ್ಡ್
- ಬಿಟಿಎಂ ಲೇಔಟ್
- ಜಯದೇವ ಆಸ್ಪತ್ರೆ
- ರಾಗಿಗುಡ್ಡ
- ಆರ್.ವಿ.ರಸ್ತೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


