ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ನಡೆದ ಆತ್ಮಾಹುತಿ ದಾಳಿ ಭಾರೀ ಚರ್ಚೆಗೆ ಕಾರಣವಾಗಿದೆ. ದೇಶದ ಪ್ರಧಾನಿ ಶೆಹಬಾಜ್ ಷರೀಫ್ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಹೇಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ನೆಗೆಪಾಟಲಿಗೆ ಗುರಿಯಾಗಿದ್ದಾರೆ.
ಭಾರತದ ವಿರುದ್ಧ ಪಾಕ್ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ನೀಡಿದ ಹೇಳಿಕೆಗೆ ಭಾರತ ಖಡಕ್ ತಿರುಗೇಟು ನೀಡಿದೆ. ಭಯೋತ್ಪಾದಕ ದಾಳಿಯನ್ನು ನವದೆಹಲಿಯೊಂದಿಗೆ ಸಂಪರ್ಕಿಸುವ ಆರೋಪ ಅಸಂಬದ್ಧವಾಗಿದೆ ಎಂದು ಹೇಳಿದ್ದು, ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ.
ಆ ದೇಶದ ಭ್ರಮಿತ ನಾಯಕತ್ವವನ್ನು ಹೊಂದಿದೆ. ಸುಳ್ಳು ಕಥೆಗಳನ್ನು ಕಟ್ಟುವ ಮೂಲಕ ವಿಶ್ವದ ಇತರ ರಾಷ್ಟ್ರಗಳ ಗಮನ ಸೆಳೆಯುವ ಪ್ರಯತ್ನವನ್ನು ಬಿಡಿ. ಪಾಕಿಸ್ತಾನ ಏನು ಎಂದು ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ತಿಳಿದಿದೆ ಎಂದು ಭಾರತ ತಿರುಗೇಟು ನೀಡಿದೆ.
ಪಾಕ್ ಹತಾಶ ಮನಸ್ಥಿತಿ: ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಇದು ತಪ್ಪು ಮತ್ತು ಆಧಾರ ರಹಿತವಾದ ಆರೋಪವಾಗಿದೆ. ಇದು ಭ್ರಮನಿರಸನ ಹೊಂದಿರುವ ಸುಳ್ಳು ನಾಯಕತ್ವದ ನಿರೂಪಣೆಯಾಗಿದೆ” ಎಂದು ಶೆಹಬಾಜ್ ಷರೀಫ್ ಆರೋಪ ನಿರಾಕರಿಸಿದ್ದಾರೆ.
“ಅಂತರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ನೈಜ ಸ್ಥಿತಿಯನ್ನು ಚೆನ್ನಾಗಿ ತಿಳಿದಿದೆ. ಇಂತಹ ಹತಾಶ ಮನಸ್ಥಿತಿ ತಂತ್ರಗಾರಿಕೆ ಮೂಲಕ ವಿಶ್ವದ ರಾಷ್ಟ್ರಗಳ ಗಮನ ಸೆಳೆಯುವ ನಿಮ್ಮ ಪ್ರಯತ್ನ ಸಫಲವಾಗುವುದಿಲ್ಲ” ಎಂದು ಹೇಳಿದ್ದಾರೆ.
“ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪಾಕಿಸ್ತಾನ ಆಂತರಿಕವಾಗಿ ನಡೆಯುತ್ತಿರುವ ಸೇನಾ ಪ್ರಚೋದಿತ ಸಾಂವಿಧಾನಿಕ ವಿರೋಧಿ ಕೃತ್ಯ, ಅಧಿಕಾರಿ ವಿಕೇಂದ್ರಿಕರಣದಿಂದ ಜನರ ಮನಸ್ಸನ್ನು ಬೇರೆ ಕಡೆ ಸೆಳೆಯಲು ಪ್ರಯತ್ನ ನಡೆಸಿದೆ” ಎಂದು ದೂರಿದ್ದಾರೆ.
“ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರ ಹೊಸ ಹುದ್ದೆಯನ್ನು ರಚಿಸಲು ಸಾಂವಿಧಾನಿಕ ತಿದ್ದುಪಡಿ ತರಲಾಗಿದೆ. ಬಳಿಕ ಶೆಹಬಾಜ್ ಷರೀಫ್ ಸರ್ಕಾರ ಅಭದ್ರತೆಯನ್ನು ಎದುರಿಸುತ್ತಿದೆ. ಆದ್ದರಿಂದ ಭಾವೋದ್ವೇಗದ, ಆಧಾರ ರಹಿತ ಹೇಳಿಕೆ ನೀಡುವ ಮೂಲಕ ಗಮನ ಸೆಳೆಯಲು ಪ್ರಯತ್ನ ನಡೆಸಿದೆ” ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಸೋಮವಾರ ಸಂಜೆ ನಡೆದ ಮಾದರಿಯಲ್ಲಿಯೇ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ದಾಳಿ ನಡೆದಿತ್ತು. ಜಿಲ್ಲಾ ಕೋರ್ಟ್ ಕಾಂಪ್ಲೆಕ್ಸ್ ಆವರಣದಲ್ಲಿ ಸ್ಫೋಟಕ ತುಂಬಿದ್ದ ಕಾರು ಸ್ಫೋಟಗೊಂಡಿತ್ತು. ಘಟನೆಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ, 30 ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವರು ಇದು ಆತ್ಮಾಹುತಿ ದಾಳಿ ಎಂದು ಹೇಳಿಕೆ ನೀಡಿದ್ದರು. ಆದರೆ ಈ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ “ಭಾರತದ ಬೆಂಬಲಿತ ಸಕ್ರಿಯ ಗುಂಪುಗಳು ಇದರಲ್ಲಿ ಭಾಗಿಯಾಗಿವೆ” ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಆದರೆ ತಮ್ಮ ಆರೋಪಕ್ಕೆ ಅವರು ಯಾವುದೇ ಸಾಕ್ಷ್ಯವನ್ನು ನೀಡಿರಲಿಲ್ಲ.
ಇಸ್ಲಾಮಾಬಾದ್‌ನಲ್ಲಿ ಆತ್ಮಾಹುತಿ ದಾಳಿ ನಡೆದಿದೆ ಎಂದು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ರಕ್ಷಣಾ ಸಚಿವ ಖವಾಜಾ ಎಂ.ಅಸಿಫ್ ಹೇಳಿದ್ದರು. ಆದರೆ ಪ್ರಧಾನಿ ಶೆಹಬಾಜ್ ಷರೀಫ್ ಸಾಮಾಜಿಕ ಜಾಲತಾಣದ ಪೋಸ್ಟ್ ಚರ್ಚೆಗೆ ಕಾರಣವಾಗಿತ್ತು.
ಶೆಹಬಾಜ್ ಶರೀಫ್ ಇಸ್ಲಾಮಾಬಾದ್ ದಾಳಿ ಹಾಗೂ ಮಂಗಳವಾರ ಬೆಳಗ್ಗೆ ಅಫ್ಘಾನಿಸ್ತಾನ ಗಡಿ ಸಮೀಪದ ಕ್ಯಾಡೆಟ್ ಕಾಲೇಜ್ ಮೇಲೆ ನಡೆದ ದಾಳಿಗೂ ಭಾರತ ಕಾರಣ ಎಂದು ಆರೋಪಿಸಿದ್ದರು. “ಈ ಎರಡೂ ದಾಳಿಗಳು ಈ ಪ್ರದೇಶದಲ್ಲಿನ ಭಾರತೀಯ ರಾಜ್ಯದ ಭಯೋತ್ಪಾದನೆಯ ಅತ್ಯಂತ ಭೀಕರ ಉದಾಹರಣೆಗಳಾಗಿವೆ. ಇಂತಹ ಹೀನ ಉದ್ದೇಶದ ಷಡ್ಯಂತ್ರಗಳನ್ನು ವಿಶ್ವವು ಖಂಡಿಸಬೇಕಾದ ಸಮಯ ಬಂದಿದೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ತನಕ ನಾವು ಅವರ ವಿರುದ್ಧದ ಯುದ್ಧವನ್ನು ಮುಂದುವರೆಸುತ್ತೇವೆ” ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


