ಅಹ್ಮದಾಬಾದ್: ನಿನ್ನೆ ( ಜೂನ್ 12 ) ಸರ್ದಾರ್ ವಲ್ಲಭಭಾಯ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಅಹ್ಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ಇಂಡಿಯಾ ( ಎಐ 171 ) ನೆಲಕ್ಕೆ ಅಪ್ಪಳಿಸಿದ್ದು, ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ಮೃತಪಟ್ಟಿದ್ದಾರೆ.
1.39ಕ್ಕೆ ಟೇಕ್ಆಫ್ ಆದ ಈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡಿತು. 40 ಸೆಕೆಂಡುಗಳು ಆಗಸದಲ್ಲಿ ಹಾರಿ ಮೇಘಾನಿ ನಗರ ಪ್ರದೇಶದಲ್ಲಿನ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ವಿಮಾನ ಬಿದ್ದ ಕೂಡಲೇ ದೊಡ್ಡ ಮಟ್ಟದ ಸ್ಪೋಟದೊಂದಿಗೆ ಪತನವಾಗಿದ್ದು, ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ.
ಇನ್ನು ಈ ವಿಮಾನ ದುರಂತ ಸಂಭವಿಸುತ್ತಿದ್ದಂತೆಯೇ ಎಕ್ಸ್ ವೇದಿಕೆಯಲ್ಲಿ ಆಕಾಶ್ ವಸ್ತ ಎಂಬ ಬಳಕೆದಾರ ವಿಮಾನದಲ್ಲಿ ಎಲ್ಲವೂ ಸರಿ ಇರಲಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಹೌದು, ಈ ವಿಮಾನ ದೆಹಲಿಯಿಂದ ಅಹ್ಮದಾಬಾದ್ಗೆ ಬಂದಿದ್ದು, ಇದರಲ್ಲಿ ಆಕಾಶ್ ಅಹ್ಮದಾಬಾದ್ವರೆಗೂ ಪ್ರಯಾಣ ಮಾಡಿದ್ದಾರೆ.
ಈ ವೇಳೆ ಆಕಾಶ್ ವಿಮಾನದ ಮಾನಿಟರ್ಗಳು, ಎಸಿ ಹಾಗೂ ರಿಮೋಟ್ ಸರಿಯಾಗಿ ಕೆಲಸ ನಿರ್ವಹಿಸದಿರುವುದನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿ ಹಂಚಿಕೊಂಡಿದ್ದಾರೆ. ಯಾವುದೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಡಿಯೊದಲ್ಲಿ ಮಾತನಾಡಿದ್ದ ಆಕಾಶ್ ವಸ್ತ ರೆಕ್ಕೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


