ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಅಸ್ಥಿಪಂಜರ ಹುಡುಕಾಟ ಪ್ರಕರಣ ಇದೀಗ ಮತ್ತೊಂದು ರೋಚಕ ತಿರುವು ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸುಜಾತಾ ಭಟ್ ಇದೀಗ ತನಿಖಾಧಿಕಾರಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ.
ಸುಜಾತಾ ಭಟ್ ದೂರಿನಲ್ಲಿದ್ದ ಅಂಶಗಳೇನಾಗಿತ್ತು?
2003ರಲ್ಲಿ ತನ್ನ ಮಗಳು ಅನನ್ಯಾ ಭಟ್, ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾಗ ಧರ್ಮಸ್ಥಳ ಪ್ರವಾಸಕ್ಕೆ ಹೋಗಿ ನಾಪತ್ತೆಯಾಗಿದ್ದಾಳೆ ಎಂದು ಸುಜಾತಾ ಭಟ್ ದೂರು ನೀಡಿದ್ದರು. ದೇವಸ್ಥಾನದ ಸಿಬ್ಬಂದಿ ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದನ್ನು ಕೆಲವರು ನೋಡಿದ್ದಾರೆಂದು, ಬೆಳ್ತಂಗಡಿ ಠಾಣೆಗೆ ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳದೆ ಬೈದು ಕಳುಹಿಸಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ವೀರೇಂದ್ರ ಹೆಗ್ಗಡೆ ಮತ್ತು ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಅವರಿಂದಲೂ ತನಗೆ ನಿಂದನೆ ಆಗಿದೆಯೆಂದು ಹೇಳಿದ್ದರು.ಅಂದು ರಾತ್ರಿ ದೇವಸ್ಥಾನದ ಸಿಬ್ಬಂದಿ ತನ್ನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ತಲೆಗೆ ಹೊಡೆದಿದ್ದರಿಂದ ಮೂರು ತಿಂಗಳು ಕೋಮಾದಲ್ಲಿದ್ದೆ ಎಂದು ವಿವರಿಸಿದ್ದರು. ಅನಾಮಿಕ ದೂರುದಾರನ ವಿಷಯ ಗೊತ್ತಾದ ನಂತರ ತನ್ನ ಮಗಳ ಅಸ್ಥಿಪಂಜರ ಸಿಕ್ಕರೆ ಅದನ್ನು ತನಗೆ ನೀಡುವಂತೆ ಮನವಿ ಮಾಡಿದ್ದರು.
ಈಗ ದೂರು ದಾಖಲಿಸಿದ ನಂತರ ಸುಜಾತಾ ಭಟ್ ಪೊಲೀಸರ ಸಂಪರ್ಕಕ್ಕೆ ಸಿಗಲಿಲ್ಲ. ಅವರ ಪರ ವಕೀಲರೂ ತನಿಖೆಗೆ ಸಹಕರಿಸಲಿಲ್ಲ. ಪೊಲೀಸರು ಅನನ್ಯಾ ಭಟ್ ಅವರ ಫೋಟೋ ಅಥವಾ ಯಾವುದೇ ದಾಖಲೆಗಳನ್ನು ಕೇಳಿದಾಗ, ‘ಮನೆಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಹೋಗಿವೆ’ ಎಂದು ಸುಜಾತಾ ಭಟ್ ಹೇಳಿದ್ದಾರೆ. ಮಗಳ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಕಾಲೇಜು ದಾಖಲೆಗಳು ಯಾವುವೂ ಅವರ ಬಳಿ ಇರಲಿಲ್ಲ.
ಅನನ್ಯಾ ಭಟ್ ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ 2003ರಲ್ಲಿ ಎಂಬಿಬಿಎಸ್ ಓದುತ್ತಿದ್ದಳು ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಣಿಪಾಲ್ ಗ್ರೂಪ್‌ನ ಎರಡೂ ಮೆಡಿಕಲ್ ಕಾಲೇಜುಗಳಿಗೆ ಭೇಟಿ ನೀಡಿದರು. 1998ರಿಂದ 2005ರವರೆಗಿನ ದಾಖಲೆಗಳನ್ನು ಪರಿಶೀಲಿಸಿದಾಗ, ಅನನ್ಯಾ ಭಟ್ ಡಿ/ಓ ಅನಿಲ್ ಭಟ್ ಎಂಬ ಹೆಸರಿನ ಯಾವುದೇ ವಿದ್ಯಾರ್ಥಿನಿ ಅಲ್ಲಿ ವ್ಯಾಸಂಗ ಮಾಡಿರಲಿಲ್ಲ ಎಂಬುದು ದೃಢಪಟ್ಟಿದೆ. ಇದರಿಂದಾಗಿ ಸುಜಾತಾ ಭಟ್ ನೀಡಿದ ದೂರಿನ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಸುಜಾತಾ ಭಟ್ ಯಾರು? ಅವರ ಉದ್ದೇಶವೇನು? ಎಂಬುದು ಪೊಲೀಸರಿಗೆ ಗೊಂದಲವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


