ಸರ್ಕಾರಿ ರಜೆ ದಿನ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಸರ್ಕಾರಿ ಶಾಲೆಗಳ ದಸರಾ ರಜೆಯನ್ನು ಅಕ್ಟೋಬರ್ 18ರ ತನಕ ವಿಸ್ತರಣೆ ಮಾಡಲಾಗಿತ್ತು.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಬಾಣದರಂಗಯ್ಯ ಸರ್ಕಾರದ ಅಧೀನ ಕಾರ್ಯದರ್ಶಿ-1 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಟಾಚಾರ) ಆದೇಶವನ್ನು ಹೊರಡಿಸಿದ್ದಾರೆ.
ಆದೇಶದ ವಿವರ: ಸರ್ಕಾರವು 2025ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿರುವ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 16 ಹೆಚ್‌ಹೆಚ್‌ಎಲ್ 2024, ದಿನಾಂಕ 21/11/2024ರ ಅಧಿಸೂಚನೆ-1ರ ಸೂಚನೆಗಳ ಕ್ರಮಸಂಖ್ಯೆ, (4)ರಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾಗಿ ದಿನಾಂಕ 18.10.2025 (ಶನಿವಾರ) ತುಲಾ ಸಂಕ್ರಮಣದ ಪ್ರಯುಕ್ತ ರಜೆ ಘೋಷಿಸಲಾಗಿತ್ತು.
ಆದರೆ ಈಗ ತುಲಾ ಸಂಕ್ರಮಣದ ಪ್ರಯುಕ್ತ ಘೋಷಿಸಲಾಗಿರುವ ಸ್ಥಳೀಯ ಸಾರ್ವತ್ರಿಕ ರಜೆಯನ್ನು ದಿನಾಂಕ 18,10.2025 (ಶನಿವಾರ) ಬದಲಾಗಿ ದಿನಾಂಕ 17.10,2025 (ಶುಕ್ರವಾರ) ಎಂಬುದಾಗಿ ತಿದ್ದಿ ಒದಿಕೊಳ್ಳತಕ್ಕದ್ದು ಎಂದು ಆದೇಶ ಹೇಳಿದೆ.
ತುಲಾ ಸಂಕ್ರಮಣ 2025. ಈ ಹಿಂದೆ ಸರ್ಕಾರ ಬಿಡುಗಡೆ ಮಾಡಿದ್ದ 2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಅ. 18 ರಂದು ಕಾವೇರಿ ಸಂಕ್ರಮಣಕ್ಕೆ ಕೊಡಗಿನಲ್ಲಿ ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಲಾಗಿತ್ತು.
ಆದರೆ ಪ್ರಸಕ್ತ ವರ್ಷದಲ್ಲಿ ದಿನಾಂಕ 17-10-2025ರಂದು ಮಧ್ಯಾಹ್ನ 1.44ರ ಸಮಯದಲ್ಲಿ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗಲಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗರಾರು ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ರಜೆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು.
ಆದ್ದರಿಂದ ಈ ಮೊದಲು ಹೊರಡಿಸಲಾಗಿದ್ದ ರಜೆ ದಿನಗಳ ಆದೇಶವನ್ನು ತಿದ್ದುಪಡಿಗೊಳಿಸಿ ಅಕ್ಟೋಬರ್ 18ರ ಬದಲು ಅಕ್ಟೋಬರ್ 17ರಂದು ರಜೆ ಘೋಷಣೆ ಮಾಡಲಾಗಿದೆ. ಈ ಆದೇಶದಂತೆ ಕೊಡಗು ಜಿಲ್ಲೆಯಾದ್ಯಂತ ಅಕ್ಟೋಬರ್ 17ರಂದು ರಜೆ ಇರಲಿದೆ.
ಭಾಗಮಂಡಲದ ಶ್ರೀ ಭಗಂಡೇಶ್ವರ ತಲಕಾವೇರಿ ದೇವಾಲಯಗಳಲ್ಲಿ ಅಕ್ಟೋಬರ್ 17ರಂದು ಮಧ್ಯಾಹ್ನ 01:44 ನಿಮಿಷಕ್ಕೆ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆ ನಡೆಯಲಿದೆ.
ಈ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಗಳಲ್ಲಿ ಊಧ್ವಾರ್ಚನೆ (ಶುಚಿತ್ವ) ಕಾರ್ಯವು ಸೋಮವಾರ ಬೆಳಗ್ಗೆ 6ಕ್ಕೆ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ.
ಆದ್ದರಿಂದ ಈ ಸಮಯದಲ್ಲಿ ಭಕ್ತಾದಿಗಳಿಗೆ ದೇವಾಲಯದ ಪ್ರವೇಶ ಹಾಗೂ ಯಾವುದೇ ಸೇವೆಗಳು ಇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕಾಗಿ ದೇವಾಲಯದ ಆಡಳಿತಾಧಿಕಾರಿಯವರ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತದ ಸಿದ್ಧತೆ: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತ ಅಗತ್ಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಅಕ್ಟೋಬರ್ 17ರಂದು ಮಧ್ಯಾಹ್ನ 01:44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ಆಗಮಿಸುತ್ತಾಳೆ. ಈ ವರ್ಷ ಮಧ್ಯಾಹ್ನ ಸಮಯದಲ್ಲಿ ತೀರ್ಥೋದ್ಭವವು ಜರುಗಲಿರುವ ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಮಾತೆಯ ದರ್ಶನವನ್ನು ಪಡೆಯಲು ಆಗಮಿಸುವ ನಿರೀಕ್ಷೆ ಇದೆ.
ಜಾತ್ರಾ ಮಹೋತ್ಸದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮ ನಡೆಸಲು ಹಾಗೂ ಇತರೆ ನಿರ್ವಹಣೆಗಾಗಿ ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ರೂ.2 ಕೋಟಿ ಅನುದಾನವನ್ನು ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ವತಿಯಿಂದ ಮುಜರಾಯಿ ಇಲಾಖೆಯ ಮೂಲಕ ರೂ.75 ಲಕ್ಷಗಳ ಅನುದಾನವನ್ನು ಮಂಜೂರು ಮಾಡಲಾಗಿದೆ.
ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ, ಬ್ಯಾರಿಕೇಡ್ ಅಳವಡಿಕೆ, ವೇದಿಕೆ ನಿರ್ಮಾಣ, ಮಳೆಯಿಂದ ರಕ್ಷಣೆಗಾಗಿ ಮೆಟಲ್ ಶೀಟ್, ಪೆಂಡಾಲ್‍ಗಳು, ಹೂವಿನ ಅಲಂಕಾರ, ತೀರ್ಥೋದ್ಭವದ ವೀಕ್ಷಣೆಯ ವೇಳೆ ನೂಕು ನುಗ್ಗಲು ಉಂಟಾಗದಂತೆ ಎಲ್‌ಇಡಿ ಪರದೆಗಳು, ಫೋಟೋಗ್ರಫಿ ಮತ್ತು ಭಕ್ತಾದಿಗಳ ಭದ್ರತೆಯ ದೃಷ್ಟಿಯಿಂದ ಅವಶ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ.
ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ದೇವಾಲಯಗಳ ಗೋಪುರ, ನೆಲಹಾಸು ಅಲಂಕಾರಿಕ ಕಲ್ಲುಗಳ ಶುಚಿತ್ವ, ಸುಣ್ಣಬಣ್ಣ ಮತ್ತು ಕಾವೇರಿ ನೀರಾವರಿ ನಿಗಮದ ವತಿಯಿಂದ ತ್ರಿವೇಣಿ ಸಂಗ್ರಮ ಸ್ನಾನಘಟ್ಟದಲ್ಲಿ ಹೂಳೆತ್ತುವುದು ಹಾಗೂ ದೇವಾಲಯದ ಆವರಣಗಳು ಮತ್ತು ಭಾಗಮಂಡಲಕ್ಕೆ ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಕಾಡು ಕಡಿದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕೆಲಸ ಪ್ರಗತಿಯಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


