ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆ ಬೆಳಗಾವಿಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಸಚಿವ ಸತೀಶ್ ಜಾರಕಿಹೊಳಿ ಪ್ರತಿಷ್ಠೆಯೂ ಚುನಾವಣೆಯಲ್ಲಿ ಅಡಗಿತ್ತು.
ಬೆಳಗಾವಿ ಡಿಸಿಸಿ ಬ್ಯಾಂಕ್‌ನ 9 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, 7 ಸ್ಥಾನಗಳಿಗೆ ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶ ಸಹ ಘೋಷಣೆಯಾಗಲಿದೆ. ಬೆಳಗಾವಿಯ ರಾಜಕೀಯ ಎಂದರೆ ಹಾಗೆ ಅದು ಜಿಲ್ಲೆಯ ಗಡಿಯನ್ನು ಮೀರಿ ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಬೆಳಗಾವಿ ಡಿಸಿಸಿ ಬ್ಯಾಂಕ್ ಮೇಲೆ 30 ವರ್ಷಗಳಿಂದ ಕತ್ತಿ ಕುಟುಂಬ ಪ್ರಾಬಲ್ಯ ಹೊಂದಿತ್ತು. ಈ ಬಾರಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಬಣದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಆ ಪ್ರಾಬಲ್ಯ ಮುರಿಯಲು ಹೊರಟಿದ್ದರು. ಬೆಳಗಾವಿಯಿಂದ ಪುತ್ರ ರಾಹುಲ್ ಜಾರಕಿಹೊಳಿಯನ್ನು ಕಣಕ್ಕಿಳಿಸಿದ್ದರು.
ಅವಿರೋಧವಾಗಿ ಆಯ್ಕೆಯಾದವರು
- ಯರಗಟ್ಟಿ ಕ್ಷೇತ್ರ ಶಾಸಕ ವಿಶ್ವಾಸ ವೈದ್ಯ
- ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ
- ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ
- ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ
- ಬೆಳಗಾವಿ ರಾಹುಲ್ ಜಾರಕಿಹೊಳಿ
- ಗೋಕಾಕ ಅಮರನಾಥ ಜಾರಕಿಹೊಳಿ
- ಸವದತ್ತಿ ವಿರೂಪಾಕ್ಷಿ ಮಾಮನಿ
- ಮೂಡಲಗಿ ನೀಲಕಂಠ ಕಪ್ಪಲಗುದ್ದಿ
- ಇತರೆ ಕ್ಷೇತ್ರ ಚನ್ನರಾಜ್ ಹಟ್ಟಿಹೊಳಿ
9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಇದರಲ್ಲಿ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸೇರಿದ್ದಾರೆ. ಜಾರಕಿಹೊಳಿ ಪೆನಲ್‌ನ 7 ನಿರ್ದೇಶಕರಿದ್ದಾರೆ.
ಅಕ್ಟೋಬರ್ 19ರಂದು 7 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಬೈಲಹೊಂಗಲ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಡಾ. ವಿಶ್ವನಾಥ ಪಾಟೀಲ, ಹುಕ್ಕೇರಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ್, ನಿಪ್ಪಾಣಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಉತ್ತಮ ಪಾಟೀಲ ಎದುರಾಳಿಗಳು.
ಡಿಸಿಸಿ ಬ್ಯಾಂಕ್ ಮೇಲೆ ಉಮೇಶ್ ಕತ್ತಿ ಭಾರೀ ಪ್ರಭಾವ ಹೊಂದಿದ್ದರು. ಬ್ಯಾಂಕಿಗೆ ಸಹೋದರ ರಮೇಶ ಕತ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ರಮೇಶ ಕತ್ತಿ 6 ಅವಧಿಗೆ ಸದಸ್ಯರಾಗಿ, 4 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಜಾರಕಿಹೊಳಿ ಕುಟುಂಬ ರಾಜ್ಯ ರಾಜಕೀಯದಲ್ಲಿ ಪ್ರಭಾವ ಹೊಂದಿದ್ದರೂ ಸಹ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಷ್ಟು ಪ್ರಭಾವ ಹೊಂದಿರಲಿಲ್ಲ. ಆದರೆ ಉಮೇಶ್ ಕತ್ತಿ ನಿಧನದ ಬಳಿಕ ರಾಜಕೀಯ ಚಿತ್ರಣ ಬದಲಾಗುತ್ತಾ ಬಂದಿತ್ತು. ಈ ಬಾರಿಯ ಚುನಾವಣೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು.
ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು. ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕ್ ಜಾರಕಿಹೊಳಿ ಚಿಕ್ಕೋಡಿಯಿಂದ 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶ ಮಾಡಿದ್ದಾರೆ. ಈಗ ಪುತ್ರ ರಾಹುಲ್ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


