ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರ ಆರೋಗ್ಯದ ಕುರಿತು ಸೋಮವಾರ ಅಪ್‌ಡೇಟ್ ಸಿಕ್ಕಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.
ಜೆಡಿಎಸ್ ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ದೇವೇಗೌಡರ ಆರೋಗ್ಯದ ಕುರಿತು ಅಪ್‌ಡೇಟ್ ನೀಡಲಾಗಿದೆ. ‘ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರವರು ಗುಣಮುಖರಾಗಿ ಇಂದು ಮನೆಗೆ ಮರಳಿದ್ದಾರೆ’ ಎಂದು ಪೋಸ್ಟ್ ಹಾಕಲಾಗಿದೆ.
‘ವೈದ್ಯರ ಸೂಚನೆಯಂತೆ ಶ್ರೀ ದೇವೇಗೌಡರಿಗೆ ಇನ್ನೂ 15 ದಿನ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭೇಟಿ ಮಾಡಲು ಅವರ ನಿವಾಸಕ್ಕೆ ದಯವಿಟ್ಟು ತೆರಳಬೇಡಿ ಎಂದು ವಿನಂತಿ’
‘ಪೂಜ್ಯ ದೇವೇಗೌಡರು ವಿಶ್ರಾಂತಿ ಬಳಿಕ, ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನಕ್ಕೆ ಖುದ್ದು ಆಗಮಿಸಿ ಎಲ್ಲರನ್ನೂ ಭೇಟಿಯಾಗಲಿದ್ದಾರೆ’ ಎಂದು ಪೋಸ್ಟ್‌ನಲ್ಲಿ ಪಕ್ಷ ತಿಳಿಸಿದೆ.
ವಿವಿಧ ಗಣ್ಯರ ಭೇಟಿ: ಭಾನುವಾರ ಮಣಿಪಾಲ್ ಆಸ್ಪತ್ರೆಗೆ ವಿವಿಧ ನಾಯಕರು ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದ್ದರು. ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕ ಶರಣಗೌಡ ಕಂದಕೂರ ಜೊತೆ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.
ಅಕ್ಟೋಬರ್ 11ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಚ್.ಡಿ.ದೇವೇಗೌಡರವರ ಆರೋಗ್ಯ ವಿಚಾರಿಸಿದ್ದರು. ಅಕ್ಟೋಬರ್ 10ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಗುಣಮುಖರಾಗಲಿ ಎಂದು ಹಾರೈಸಿದ್ದರು.
ಕಳೆದ ವಾರ 92 ವರ್ಷದ ದೇವೇಗೌಡರ ಆರೋಗ್ಯ ಏರುಪೇರಾಗಿತ್ತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


