ಬೆಳಗಾವಿ: ಬುದ್ದಿಮಾಂದ್ಯ ಮಕ್ಕಳ ಪೋಷಕರಿಗೆ ನೀಡುತ್ತಿರುವ ವಿಮಾ ಯೋಜನೆಯ ಹಣವನ್ನು 20 ಸಾವಿರದಿಂದ 2 ಲಕ್ಷ ರೂಗಳಿಗೆ ಏರಿಕೆ ಮಾಡುವಂತೆ ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದರ ಜೊತೆಗೆ ವಿಕಲಚೇತನ ವ್ಯಕ್ತಿಗಳನ್ನು ಸಾಮಾನ್ಯರು ಮದುವೆಯಾದಲ್ಲಿ ಪ್ರೋತ್ಸಾಹಧನ ನೀಡುವ ಯೋಜನೆಯ ಅನುದಾನವನ್ನು 5 ಸಾವಿರದಿಂದ 5 ಲಕ್ಷ ರೂಗೆ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ರೂಪಕಲಾ ನೇತೃತ್ವದ ಸಮಿತಿ ಈ ವರದಿಯನ್ನು ವಿಧಾನಮಂಡಲ ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯೆ ಉಮಾಶ್ರೀ ಅವರು ವಿಧಾನಪರಿಷತ್ತಿನಲ್ಲಿ ಒಪ್ಪಿಸಿದ್ದಾರೆ.
ಹಗಲು ಯೋಗಕ್ಷೇಮ ಕೇಂದ್ರಗಳ ಯೋಜನೆಯನನು ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ನಡೆಸಲು ಸಮಿತಿ ಶಿಫಾರಸು ಮಾಡಿದೆ.
ಗ್ರಾಮ ಪಂಚಾಯಿತಿ ಹಂತದಲ್ಲಿ ವಿಕಲಚೇತನರಲ್ಲಿ ಶ್ರವಣ ದೋಷ ಇರುವವರಿಗೆ ಹಿಯರಿಂಗ್ ಸಾಧನ, ಕನ್ನಡಕ ಹಾಗೂ ಸ್ಟಿಕ್ ಇತ್ಯಾದಿಗಳನ್ನು ಸರ್ಕಾರದ ವತಿಯಿಂದ ಒದಗಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ನಗರ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿನ ಸಹಾಯಕ ಹುದ್ದೆಗಳಿಗೆ ಸ್ಥಳೀಯರಿಗೆ ಮಾತ್ರ ಅವಕಾಶ ಎಂಬ ನಿಯಮದನ್ವಯ ಸ್ಥಳೀಯರು ಹುದ್ದೆಗೆ ಬಾರದ ಇದ್ದರೆ ಬೇರೆಯವರಿಗೆ ಆದ್ಯತೆ ನೀಡಲಾಗುವುದೆಂಬ ಷರತ್ತನ್ನು ನಿಯಮದಲ್ಲಿ ಅಳವಡಿಸುವಂತೆ ಸಮಿತಿ ಶಿಫಾರಸು ಮಾಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


