ಕೆಜಿಎಫ್… ಕನ್ನಡ ಚಿತ್ರರಂಗದ ಹೆಮ್ಮೆ. ಈ ಚಿತ್ರದ ಬಳಿಕ ಇದೇ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಅದೆಷ್ಟೋ ಕನ್ನಡ ಚಿತ್ರಗಳು ಬಂದು ಹೋದವಾದರೂ ಯಾವ ಚಿತ್ರವೂ ಕೆಜಿಎಫ್ ರೀತಿ ಬ್ರಾಂಡ್ ಎನಿಸಿಕೊಳ್ಳಲಿಲ್ಲ.
ಕನ್ನಡ ಸಿನಿಮಾ ಮಾತ್ರವಲ್ಲ ಕೆಜಿಎಫ್ ಚಿತ್ರವನ್ನು ಜನತೆ ಮೆಚ್ಚಿಕೊಂಡ ರೀತಿ ನಂತರ ಬಂದ ಭಾರತದ ಯಾವ ಚಿತ್ರಕ್ಕೂ ಸಿಕ್ಕಿಲ್ಲ ಎಂದರೆ ತಪ್ಪಾಗುವುದಿಲ್ಲ. ಪುಷ್ಪ, ಕಲ್ಕಿ, ಅನಿಮಲ್ ಹೀಗೆ ಅನೇಕ ಚಿತ್ರಗಳು ದೇಶವ್ಯಾಪಿ ಸದ್ದು ಮಾಡಿದವಾದರೂ ಕೆಜಿಎಫ್ ನಿರ್ಮಿಸಿದ್ದ ಅಬ್ಬರವನ್ನು ಇವುಗಳ ಕೈನಲ್ಲಿ ಮಾಡಲಾಗಲಿಲ್ಲ.
2018ರಲ್ಲಿ ಬಿಡುಗಡೆಯಾದ ಚಾಪ್ಟರ್ 1 ವೀಕ್ಷಿಸಿದ ಸಿನಿ ರಸಿಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟರು. ಥಿಯೇಟರ್‌ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡಿದ ಚಾಪ್ಟರ್ 1 ಕ್ಲೈಮ್ಯಾಕ್ಸ್ ಚಾಪ್ಟರ್ 2ಗೆ ಕಾತರತೆಯನ್ನು ಹುಟ್ಟುಹಾಕಿತ್ತು.
ಇದೇ ಕಾರಣಕ್ಕೆ 2022ರ ಏಪ್ರಿಲ್ 14ರಂದು ಚಾಪ್ಟರ್ 2 ಬಿಡುಗಡೆಯಾದಾಗ ಇಡೀ ದೇಶಾದ್ಯಂತ ದೊಡ್ಡ ಬಿಡುಗಡೆಯನ್ನು ಕಂಡಿತು. ಮೊದಲ ಚಿತ್ರದ ಕ್ಲೈಮ್ಯಾಕ್ಸ್ ಹುಟ್ಟುಹಾಕಿದ್ದ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಜನ ಸಾಗರವೇ ಚಿತ್ರಮಂದಿರಕ್ಕೆ ಹರಿದುಬಂದಿತ್ತು.
ಇನ್ನು ಚಾಪ್ಟರ್ 2 ಮುಕ್ತಾಯಗೊಳ್ಳುತ್ತಿದ್ದಂತೆ ಆನಂದ್ ಇಂಗಳಗಿ ಕಚೇರಿಯಲ್ಲಿ ಮತ್ತೊಂದು ಚಾಪ್ಟರ್‌ನ ಬುಕ್ ದೊರಕುವ ದೃಶ್ಯವಿದೆ. ಆ ಬುಕ್‌ನ ಮುಖಪುಟದಲ್ಲಿ ಚಾಪ್ಟರ್ ಎಂಬ ಬರಹವನ್ನು ಕಂಡೊಡನೆ ಇದು ಮುಂದಿನ ಭಾಗದ ಮುನ್ಸೂಚನೆ ಎಂದು ಚಿತ್ರಮಂದಿರದಲ್ಲೇ ಹುಚ್ಚೆದ್ದು ಕುಣಿದಿದ್ದರು.
ಈ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಮೂರನೇ ಭಾಗದ ಸುಳಿವು ನೀಡಿದ್ದರು. ಆದರೆ ಈ ಕುರಿತಾದ ಪೋಸ್ಟರ್ ಆಗಲಿ ಅಥವಾ ಹೇಳಿಕೆಯನ್ನಾಗಲಿ ಚಿತ್ರತಂಡ ನೀಡಿರಲಿಲ್ಲ. ಯಶ್ ಟಾಕ್ಸಿಕ್ ಸಿನಿಮಾ ಶುರು ಮಾಡಿದ್ದು, ಚಾಪ್ಟರ್ 3 ಬರುತ್ತಾ ಇಲ್ವಾ ಎಂಬ ಅನುಮಾನಗಳು ಮೂಡಿದ್ದವು.
ಈ ಅನುಮಾನಗಳಿಗೆ ಇಂದು ( ಏಪ್ರಿಲ್ 14 ) ಹೊಂಬಾಳೆ ಫಿಲ್ಮ್ಸ್ ಉತ್ತರ ನೀಡಿದ್ದು, ಕೆಜಿಎಫ್ ಚಾಪ್ಟರ್ 2ಗೆ ಮೂರು ವರ್ಷ ತುಂಬಿದ ಕಾರಣ ಚಿತ್ರದ ವಿಶೇಷ ಎಡಿಟ್ ಅನ್ನು ಹಂಚಿಕೊಂಡಿದೆ. ಈ ವಿಡಿಯೊನ ಕೊನೆಯಲ್ಲಿ ಕೆಜಿಎಫ್ ಚಾಪ್ಟರ್ 3 ಆದಷ್ಟು ಬೇಗ ಬರಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 3 ಯಶ್ ಮುಂದಿನ ಸಿನಿಮಾ ಎಂದು ಹೊಂಬಾಳೆ ಫಿಲ್ಮ್ಸ್ ಅಪ್‌ಡೇಟ್ ಕೊಟ್ಟಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


