ಬೆಂಗಳೂರು: ದೇಶಾದ್ಯಂತ ಎಸ್‍ಸಿಪಿ, ಟಿಎಸ್‍ಪಿ ಕಾನೂನುಗಳನ್ನು ಜಾರಿಗೆ ಮಾಡಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮೊದಲಿಗನಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ದೇಶದಲ್ಲೇ ಆಂಧ್ರಪ್ರದೇಶ ಹೊರತುಪಡಿಸಿದರೆ ಕರ್ನಾಟಕ ಸರ್ಕಾರ ಎರಡನೆಯದಾಗಿ ಎಸ್‍ಸಿಪಿ, ಟಿಎಸ್‍ಪಿ ಜಾರಿಗೆ ತಂದಿದೆ. ಜನಸಂಖ್ಯೆಗನುಗುಣವಾಗಿ ಹಣ ಬಳಕೆ ಮಾಡುತ್ತಿದ್ದಾವೆ. ಇದನ್ನು ಮರೆಮಾಚಲು ಬಿಜೆಪಿಯವರು ಪರಿಶಿಷ್ಟರ ಅಭಿವೃದ್ಧಿಗೆ ಹಣವನ್ನು ಬೇರೆ ರೀತಿ ವರ್ಗಾವಣೆ ಮಾಡಲಾಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲಿ ಎಸ್‍ಸಿಪಿ, ಟಿಎಸ್‍ಪಿ ಕಾಯ್ದೆಯಿಲ್ಲ. ಟೀಕೆ ಮಾಡುವ ಬಿಜೆಪಿಯು ಕೇಂದ್ರದಲ್ಲಿ ಕೇಂದ್ರದಲ್ಲಿ ಎಸ್‍ಸಿಪಿ, ಟಿಎಸ್‍ಪಿಯನ್ನು ಜಾರಿಗೊಳಿಸಲಿ.ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಕಡಿಮೆ ಹಣ ನಿಗದಿ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಕಾಯ್ದೆ ತಂದ ಪರಿಣಾಮ ಈ ವರ್ಷ 32 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಬಡ್ತಿ ಮೀಸಲಾತಿಗೆ ಇಡೀ ದೇಶದಲ್ಲೇ ನಾವು ಕಾಯ್ದೆ ರೂಪಿಸಿದ್ದೇವೆ. ಬಿಜೆಪಿಯವರು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದರು.
ಮಹಿಳೆಯರಿಗೆ, ಪರಿಶಿಷ್ಟರಿಗೆ, ಶೋಷಿತರಿಗೆ ಸಮಾನತೆ ನೀಡುವ ಆಶಯವನ್ನು ಸಂವಿಧಾನ ಹೊಂದಿದೆ. ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಉದ್ದೇಶ ಕೂಡ ಸಮಾನತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಜನರಿಗೆ ಖರೀದಿಸುವ ಶಕ್ತಿ ಇಲ್ಲದೇ ಹೋದರೆ ಆರ್ಥಿಕ ಚಟುವಟಿಕೆಗಳು ಕುಸಿಯುತ್ತದೆ ಎಂದು ಹೇಳಿದರು.
ಜಾತಿ ವ್ಯವಸ್ಥೆಗೆ ಚಲನಶೀಲತೆ ಇಲ್ಲ. ವಿದ್ಯಾವಂತರೇ ಜಾತಿ ಮಾಡುತ್ತಿದ್ದಾರೆ. ಅಂಬೇಡ್ಕರ್ರವರು ತಮ್ಮ ಜ್ಞಾನದಿಂದ ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಬಳಕೆ ಮಾಡಿದ್ದರು. ಅಂಬೇಡ್ಕರ್ರವರ ಮೂಲಮಂತ್ರ ಹಾಗೂ ಆಶಯಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಸಂಘಟಿತರಾಗಬೇಕು. ಅಂಬೇಡ್ಕರ್ ಇಲ್ಲದಿದ್ದರೆ ಶೋಷಿತರಿಗೆ ನ್ಯಾಯ ಸಿಗುತ್ತಿರಲಿಲ್ಲ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


