ಬಿಹಾರ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಘೋಷಣೆಯಾಗಿದೆ. ಚುನಾವಣೆಯ ಫಲಿತಾಂಶದಲ್ಲಿ ಹಲವು ಅಚ್ಚರಿಯ ಅಂಶಗಳಿವೆ. ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ಮಹಾಘಟಬಂಧನ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗ ಉಂಟಾಗಿದೆ.
ಸದ್ಯದ ಮಾಹಿತಿಯಂತೆ ಎನ್‌ಡಿಎ ಮೈತ್ರಿಕೂಟ 201 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಹಾರ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122. ಚುನಾವಣಾ ಆಯೋಗದ ಪ್ರಕಾರ ಸದ್ಯ ಬಿಜೆಪಿ 61, ಜೆಡಿಯು 41 ಸೀಟುಗಳಲ್ಲಿ ಜಯಗಳಿಸಿದೆ.
ರಾಜ್ಯದ 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಶುಕ್ರವಾರ ಮತ ಎಣಿಕೆ ನಡೆಯುತ್ತಿದೆ. ಚುನಾವಣಾ ಫಲಿತಾಂಶದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ಕ್ಷೇತ್ರ ಮೊಕಾಮಾ. ರಾಜಕಾರಣಿಯಾಗಿ ಬದಲಾಗಿರುವ ಭೂಗತ ಪಾತಕಿ ಅನಂತ್ ಕುಮಾರ್ ಸಿಂಗ್ ಈ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಅವರು ಜಯಗಳಿಸಿದ್ದಾರೆ.
ಅನಂತ್ ಕುಮಾರ್ ಸಿಂಗ್ ಜೈಲಿನಲ್ಲಿ: ನವೆಂಬರ್ 6ರಂದು ಮೊಕಾಮಾ ಕ್ಷೇತ್ರದಲ್ಲಿ ಮತದಾನ ನಡೆದಿತ್ತು. 8 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಜೆಡಿಯು ಅಭ್ಯರ್ಥಿ ಅನಂತ್ ಕುಮಾರ್ ಸಿಂಗ್ 91,416 ಮತಗಳನ್ನು ಪಡೆಯುವ ಮೂಲಕ 28,206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಆದರೆ ಈಗ ಅನಂತ್ ಕುಮಾರ್ ಸಿಂಗ್ ಜೈಲಿನಲ್ಲಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿದ ದಿನವೇ ಕೊಲೆ ಪ್ರಕರಣದಲ್ಲಿ ಅನಂತ್ ಕುಮಾರ್ ಸಿಂಗ್ ಬಂಧಿಸಲಾಗಿದೆ. ಚುನಾವಣಾ ಪ್ರಚಾರದ ವೇಳೆ ಜನ್ ಸುರಾಜ್ ಪಕ್ಷದ ಕಾರ್ಯಕರ್ತನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅನಂತ್ ಕುಮಾರ್ ಸಿಂಗ್ ಆರೋಪಿ. ಗುಂಡು ಹಾರಿಸಿ ಅನಂತ್ ಕುಮಾರ್ ಸಿಂಗ್ ಜನ್ ಸುರಾಜ್ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾನೆ ಎಂಬುದು ಆರೋಪವಾಗಿದೆ.
ಮೊಕಾಮಾ ಕ್ಷೇತ್ರದಲ್ಲಿ ಅನಂತ್ ಕುಮಾರ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ಆರ್‌ಜೆಡಿಯ ವೀಣಾ ದೇವಿ 63,210 ಮತಗಳನ್ನು ಪಡೆದಿದ್ದಾರೆ. ಜನ್ ಸುರಾಜ್ ಪಕ್ಷದ ಪ್ರಿಯದರ್ಶನ್ ಪಿಯೂಷ್ 19,365 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದ್ದಾರೆ.
ಅನಂತ್ ಕುಮಾರ್ ಸಿಂಗ್ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಮ್ಮ ಬಳಿ 37.88 ಕೋಟಿ ರೂ. ಆಸ್ತಿ ಇದೆ ಎಂದು ಅಫಿಡೆವಿಟ್ ಸಲ್ಲಿಕೆ ಮಾಡಿದ್ದಾರೆ. 28 ಕ್ರಿಮಿನಲ್ ಪ್ರಕರಣಗಳು ಸಹ ಅನಂತ್ ಕುಮಾರ್ ಸಿಂಗ್ ವಿರುದ್ಧ ದಾಖಲಾಗಿವೆ. ಬಿಹಾರದ ಮಾಜಿ ಡಾನ್ ಅನಂತ್ ಕುಮಾರ್ ಸಿಂಗ್ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.
ಜನ್ ಸುರಾಜ್ ಪಕ್ಷದ ಕಾರ್ಯಕರ್ತನ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು, ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನವೇ ಅನಂತ್ ಕುಮಾರ್ ಸಿಂಗ್ ಬಂಧಿಸಿದ್ದರು. ಆದರೆ ಅನಂತ್ ಕುಮಾರ್ ಸಿಂಗ್ ಜೈಲಿನಲ್ಲಿದ್ದರೂ ಸಹ ಚುನಾವಣೆ ಗೆದ್ದಿದ್ದಾರೆ.
ಅನಂತ್ ಕುಮಾರ್ ಸಿಂಗ್ ನಿವಾಸದಲ್ಲಿ ಸುಮಾರು 1 ಲಕ್ಷ ಜನರು ಶುಕ್ರವಾರ ಸೇರಿದ್ದರು. ಮತಗಳ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೇ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಕಾರ್ಯಕರ್ತರು, ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದರು.
ಲಕ್ಷಾಂತರ ಜನರಿಗೆ ಮಹಾ ಭೋಜನ ಆಯೋಜನೆ ಮಾಡಲಾಗಿತ್ತು. ಅವರ ನಿವಾಸದಲ್ಲಿಯೇ ನಿರಂತರವಾಗಿ ಆಹಾರವನ್ನು ತಯಾರಿಸಲಾಗುತ್ತಿದೆ. ತಮ್ಮ ನಾಯಕ ಜೈಲಿನಲ್ಲಿದ್ದರೂ ಸಹ ಮನೆಯ ಬಳಿ ಸೇರಿದ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.
ಮೊದಲ ಸುತ್ತಿನ ಎಣಿಕೆಯಲ್ಲಿಯೇ 4,524 ಮತಗಳ ಮುನ್ನಡೆಯನ್ನು ಅನಂತ್ ಕುಮಾರ್ ಸಿಂಗ್ ಪಡೆದಿದ್ದರು. 7ನೇ ಸುತ್ತಿನ ಹೊತ್ತಿಗೆ ಮುನ್ನಡೆ 26,229 ಮತಗಳಿಗೆ ಏರಿಕೆ ಕಂಡಿತ್ತು. 13ನೇ ಸುತ್ತಿನಲ್ಲಿ 49,299 ಮತಗಳು, 25ನೇ ಸುತ್ತಿನ ವೇಳೆಗೆ ಅವರು 63,692 ಮತಗಳ ಮುನ್ನಡೆಯನ್ನು ಸಾಧಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


