ಬೆಂಗಳೂರು: ವಿಲೀನ ಮತ್ತು ಪಬ್ಲಿಕ್ ಶಾಲೆ ಸ್ಥಾಪನೆ ನೆಪದಲ್ಲಿ ರಾಜ್ಯದಲ್ಲಿ 7,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಟಿದೆ. ವಿಪರ್ಯಾಸವೆಂದರೆ,700 ಪಬ್ಲಿಕ್ ಶಾಲೆಗಳಿಗೆ 7,000 ಸರ್ಕಾರಿ ಶಾಲೆಗಳಿಗೆ ಇತಿಶ್ರೀ ಹಾಡಲು ಹೊರಟಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಸಂಬಂಧ ಎಕ್?ಸನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆ ಬೇರುಸಹಿತ ಸರ್ವನಾಶವಾಗಿದೆ. ಸುಸಜ್ಜಿತ ಕಟ್ಟಡ, ಶೌಚಾಲಯ, ಕ್ರೀಡಾಂಗಣ, ಗ್ರಂಥಾಲಯ, ಮಕ್ಕಳಿಗೆ ಸಮವಸ್ತ್ರ, ಪುಸ್ತಕ ಒದಗಿಸಲಾಗದ ಕೈಲಾಗದ ಸರ್ಕಾರವು ಈಗ ಜವಾಬ್ದಾರಿಯಿಂದ ಪಾರಾಗಲು ಸಲೀಸು ಮಾರ್ಗ ಕಂಡುಕೊಂಡಿದೆ ಎಂದು ಟೀಕಿಸಿದ್ದಾರೆ.
ಆಘಾತಕಾರಿ ಸಂಗತಿ ಎಂದರೆ, ಶೇ.10ಕ್ಕಿಂತ ಕಡಿಮೆ ಹಾಜರಾತಿಯುಳ್ಳ 5,000 ಶಾಲೆ, ಶೇ.50ಕ್ಕೂ ಕಡಿಮೆ ಹಾಜರಾತಿ ಹೊಂದಿರುವ 25,000 ಶಾಲೆಗಳಿಗೆ ಶಾಶ್ವತವಾಗಿ ಬೀಗ ಜಡಿಯಲು ಸರ್ಕಾರ ಮುಂದಾಗಿರುವುದು ದುರದೃಷ್ಟಕರ ಎಂದಿದ್ದಾರೆ.
ಮಕ್ಕಳು ಸರ್ಕಾರಿ ಶಾಲೆಗಳಿಗೆ ಏಕೆ ಬರುತ್ತಿಲ್ಲ? ಎನ್ನುವುದಕ್ಕೆ ಕಾರಣ ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳುವ ಬದಲು, ಗ್ರಾಮೀಣ ಭಾಗದ ಬಡಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಗಿಸಿ ಇಡೀ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಖಾಸಗಿಯವರಿಗೆ ಧಾರೆ ಎರೆದು ಶಿಕ್ಷಣ ವ್ಯಾಪಾರೀಕರಣಕ್ಕೆ ಮತ್ತಷ್ಟು ಶಕ್ತಿ ಉತ್ತೇಜನ ನೀಡುವುದು ಕಾಂಗ್ರೆಸ್ ಸರ್ಕಾರದ ದುರುದ್ದೇಶ ಆಗಿದೆ ಎಂದು ಅವರು ಆಪಾದಿಸಿದ್ದಾರೆ.
ರಾಜ್ಯದಲ್ಲಿ 60,000 ಶಿಕ್ಷಕರ ಕೊರತೆ ಇದೆ. ಕೆಲ ದಿನಗಳಲ್ಲಿಯೇ 6,000 ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಖಾಲಿ ಹುದ್ದೆಗಳನ್ನು ನೇಮಕ ಮಾಡುವ ಬದಲಿಗೆ ಸರ್ಕಾರ ಶಿಕ್ಷಣ ವ್ಯವಸ್ಥೆಗೆ ಶಿಕ್ಷೆ ವಿಧಿಸುವ ದುಷ್ಕೃತ್ಯಕ್ಕೆ ಕೈ ಹಾಕಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ
ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲಿನತ್ತ ಕಾಂಗ್ರೆಸ್: ವೋಟ್ ಚೋರಿ ಮಾಡಿದ್ದಾರಲ್ಲ; ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


