ಬಿಹಾರ ವಿಧಾನಸಭೆ ಚುನಾವಣೆ 2025ರಲ್ಲಿ ಗೆದ್ದು ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ. ಚುನಾವಣೆಯಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗ ಆಗಿದೆ. ಸದ್ಯದ ಮಾಹಿತಿಯಂತೆ ಎನ್‌ಡಿಎ ಮೈತ್ರಿಕೂಟ 199 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122.
ಬಿಹಾರ ರಾಜ್ಯದ 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಶುಕ್ರವಾರ ಮತ ಎಣಿಕೆ ನಡೆಯುತ್ತಿದೆ. ಚುನಾವಣೆಯಲ್ಲಿ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಇಬ್ಬರು ಪುತ್ರರು ಕಣದಲ್ಲಿದ್ದಾರೆ.
ಲಾಲೂ ಪ್ರಸಾದ್ ಯಾದವ್, ರಾಬ್ರಿ ದೇವಿ ದಂಪತಿಯ ಒಬ್ಬ ಪುತ್ರ ತೇಜಸ್ವಿ ಯಾದವ್ ಆರ್‌ಜೆಡಿ ಪಕ್ಷದ ನಾಯಕ. ರಾಘೋಪುರ ಕ್ಷೇತ್ರದಲ್ಲಿ ಅವರು ಮುನ್ನಡೆಯಲ್ಲಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಸಹ ಅವರೇ.
ಲಾಲೂ ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಲ್ಲಿ ತೀವ್ರ ಹಿನ್ನಡೆ ಎದುರಿಸಿದ್ದಾರೆ. ಆರ್‌ಜೆಡಿ ಪಕ್ಷದಿಂದ ದೂರವಾಗಿ ಜನಶಕ್ತಿ ಜನತಾದಳ (ಜೆಜೆಡಿ) ಎಂಬ ಪಕ್ಷವನ್ನು ಸ್ಥಾಪನೆ ಮಾಡಿ ಅದರ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದಾರೆ.
4ನೇ ಸ್ಥಾನದಲ್ಲಿ ಲಾಲೂ ಪುತ್ರ: ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಯಾದವ್ ಸದ್ಯ 7,985 ಮತಗಳನ್ನು ಪಡೆದಿದ್ದು 21,690 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಕ್ಷೇತ್ರದಲ್ಲಿ ಅವರು 4ನೇ ಸ್ಥಾನದಲ್ಲಿದ್ದಾರೆ.
ಕ್ಷೇತ್ರದಲ್ಲಿ ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷದ ಸಂಜಯ್ ಕುಮಾರ್ ಸಿಂಗ್ 29,675 ಮತಗಳನ್ನು ಪಡೆದು 10,663 ಮತಗಳ ಮನ್ನಡೆಯಲ್ಲಿದ್ದಾರೆ.
2ನೇ ಸ್ಥಾನದಲ್ಲಿ ಆರ್‌ಜೆಡಿಯ ಮುಕೇಶ್ ಕುಮಾರ್ ರೌಶನ್ 19012 ಮತ ಇದ್ದಾರೆ. 3ನೇ ಸ್ಥಾನದಲ್ಲಿ ಅಮಿತ್ ಕುಮಾರ್ ಇದ್ದು, 4ನೇ ಸ್ಥಾನದಲ್ಲಿ ತೇಜ್ ಪ್ರತಾಪ್ ಯಾದವ್ ಇದ್ದಾರೆ. ಸದ್ಯದ ಫಲಿತಾಂಶ ನೋಡಿದರೆ ಠೇವಣಿಯನ್ನು ಸಹ ಅವರು ಕಳೆದುಕೊಳ್ಳಲಿದ್ದಾರೆ.
2020ರ ಚುನಾವಣೆಯಲ್ಲಿ ತೇಜ್ ಪ್ರತಾಪ್ ಯಾದವ್ ಮಹುವಾ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಕುಟುಂಬದೊಳಗಿನ ಅಸಮಾಧಾನದ ಕಾರಣ ಆರ್‌ಜೆಡಿ ಬಿಟ್ಟು ಜನಶಕ್ತಿ ಜನತಾದಳ (ಜೆಜೆಡಿ) ಎಂಬ ಪಕ್ಷವನ್ನು ಕಟ್ಟಿದ್ದಾರೆ. ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಲಾಲೂ ಕುಟುಂಬ ಬಿಹಾರ ರಾಜಕೀಯದಲ್ಲಿ ಭಾರೀ ಪ್ರಭಾವ ಹೊಂದಿದೆ. ಆದರೆ ತೇಜ್ ಪ್ರತಾಪ್ ಯಾದವ್ ಜನಶಕ್ತಿ ಜನತಾದಳ (ಜೆಜೆಡಿ) ಪಕ್ಷವನ್ನು ಘೋಷಣೆ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಲಾಲೂ ಪ್ರಸಾದ್ ಯಾದವ್ ತೇಜ್ ಪ್ರತಾಪ್ ಯಾದವ್ ಜನಶಕ್ತಿ ಜನತಾದಳ (ಜೆಜೆಡಿ) ಎಂಬ ಪಕ್ಷವನ್ನು ಘೋಷಣೆ ಮಾಡಿದ ಬಳಿಕ ಅವರನ್ನು ಆರ್‌ಜೆಡಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದರು. ಪಕ್ಷದ ನೈತಿಕ ಮೌಲ್ಯಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಪಕ್ಷದಿಂದ ಹೊರಹಾಕಲಾಗಿದೆ ಎಂದು ಹೇಳಿದ್ದರು.
ತೇಜ್ ಪ್ರತಾಪ್ ಯಾದವ್ 2018ರಲ್ಲಿ ಮಾಜಿ ಸಚಿವ ಚಂದ್ರಿಕಾ ರಾಯ್ ಪುತ್ರಿ ಜೊತೆ ವಿವಾಹವಾಗಿದ್ದರು. ಆದರೆ ಬಳಿಕ ವಿಚ್ಛೇಧನ ಪಡೆದುಕೊಂಡಿದ್ದರು. ಚುನಾವಣೆ ಸಮಯದಲ್ಲಿ ಅವರು ಅನುಷ್ಕಾ ಯಾದವ್ ಎಂಬ ಯುವತಿ ಜೊತೆಗಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು.
12 ವರ್ಷಗಳಿಂದ ಅನುಷ್ಕಾ, ನಾನು ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದರು. ಇದನ್ನು ನಾನು ಎಲ್ಲರೊಂದಿಗೆ ಹೇಳಿಕೊಳ್ಳಲು ಈ ಪೋಸ್ಟ್ ಹಾಕುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಬಳಿಕ ನನ್ನ ಫೇಸ್ ಬುಕ್ ಹ್ಯಾಕ್ ಆಗಿದೆ ಎಂದು ಸಹ ತಿಳಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


