ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವು ಸೋಲಿನ ನಿರ್ಧಾರವಾಗಲಿದೆ.
ನವೆಂಬರ್ 6 ಹಾಗೂ 11ರಂದು ಕ್ರಮವಾಗಿ 121 ಹಾಗೂ 122 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, 243 ಕ್ಷೇತ್ರಗಳ ಪೈಕಿ 122 ಕ್ಷೇತ್ರಗಳಲ್ಲಿ ಗೆದ್ದವರು ಅಧಿಕಾರವನ್ನು ಪಡೆಯಲಿದ್ದಾರೆ.
ಇನ್ನು ಈ ಬಾರಿ ಬಿಹಾರದ ಜನ ಬದಲಾವಣೆ ಬಯಸಿದ್ದು, ಕಣಕ್ಕಿಳಿದ ಎನ್‌ಡಿಎ ಹಾಗೂ ಮಹಾಘಟ್‌ಬಂಧನ್ ನಡುವೆ ನೇರಾನೇರ ಪೈಪೋಟಿ ಇರಲಿದೆ ಎಂದೇ ಊಹಿಸಲಾಗಿತ್ತು. ಆದರೆ ನಿರೀಕ್ಷೆ ಉಲ್ಟಾ ಹೊಡೆದಿದ್ದು, ಎನ್‌ಡಿಎ ಅಬ್ಬರಿಸಿದೆ. ಮಧ್ಯಾಹ್ನ 12 ಗಂಟೆ ಸಮಯಕ್ಕೆ 200+ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿರುವ ಎನ್‌ಡಿಎ ಮಹಾಘಟ್‌ಬಂಧನ್ ಹತ್ತಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ದಾಪುಗಾಲಿಟ್ಟಿದೆ.
ಸದ್ಯ ಜನ ನೀಡಿರುವ ಈ ತೀರ್ಪು ಮಹಾಘಟ್‌ಬಂಧನ್ ಬಣಕ್ಕೆ ಭಾರೀ ಮುಖಭಂಗವನ್ನುಂಟುಮಾಡಿದ್ದು, ಚುನಾವಣೆಗೂ ಮುನ್ನ ಬಿಹಾರದಲ್ಲಿ ಭಾರೀ ಪ್ರಚಾರ ಮಾಡಿದ್ದ ಹಾಗೂ ಮತದಾರರ ಅಧಿಕಾರದ ಯಾತ್ರೆ ಮಾಡಿದ್ದ ರಾಹುಲ್ ಗಾಂಧಿಗೆ ಜನ ಕೈಕೊಟ್ಟಿದ್ದಾರೆ.
ಹೀಗೆ ಭಾರೀ ಮುಖಭಂಗಕ್ಕೊಳಗಾಗಿರುವ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಐಟಿ ಸೆಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟೀಕೆಗಳನ್ನು ಆರಂಭಿಸಿವೆ. ವೋಟ್ ಚೋರಿ ಆಂದೋಲನ ಆರಂಭಿಸಿ ಬಿಜೆಪಿ ವಿರುದ್ಧ ದೊಡ್ಡ ಆರೋಪ ಮಾಡಿದ್ದ ರಾಹುಲ್ ಮೇಲಿನ ಜಿದ್ದನ್ನು ಬಿಹಾರದ ಫಲಿತಾಂಶ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ.
ಬಿಜೆಪಿಯ ಅಮಿತ್ ಮಾಳ್ವಿಯ ತಮ್ಮ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿಗೆ ಇದು 95ನೇ ಚುನಾವಣೆಯ ಸೋಲು ಎಂದು ಅಂಕಿಅಂಶಗಳನ್ನು ಹಂಚಿಕೊಂಡಿದ್ದು, ಇವರಿಗೆ ಪ್ರಶಸ್ತಿಯನ್ನು ನೀಡಬೇಕು ಎಂದು ಕಾಲೆಳೆದಿದ್ದಾರೆ. ಭಾರತ ಭೂಪಟ ಬಳಸಿ ಯಾವ ರಾಜ್ಯಗಳ ಯಾವೆಲ್ಲ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಕೆಲಸ ಮಾಡಿ ಸೋತಿದ್ದಾರೆ ಎಂಬ ಪಟ್ಟಿಯನ್ನು ತಯಾರಿಸಿ ಈ ಬಾರಿಯ ಬಿಹಾರದ ಸೋಲು 95ನೇ ಸೋಲಾಗಿದೆ ಎಂದು ಲೆಕ್ಕ ಕೊಟ್ಟಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


