ಬಿಹಾರ ವಿಧಾನಸಭೆ ಚುನಾವಣೆ 2025ರ ಮತ ಎಣಿಕೆ ಶುಕ್ರವಾರ ನಡೆಯುತ್ತಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122. ರಾಜ್ಯದ 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಮತಗಳ ಎಣಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಸದ್ಯದ ಮಾಹಿತಿಯಂತೆ ಎನ್‌ಡಿಎ 157, ಮಹಾಘಟಬಂಧನ್ 79 ಸೀಟುಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ, ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ಎದುರಾಳಿಗಳು. ಕಾಂಗ್ರೆಸ್ ಪಕ್ಷ ಆರ್‌ಜೆಡಿಗಿಂತ ಕಡಿಮೆ ಸೀಟು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.
ಕಾಂಗ್ರೆಸ್ ನಾಯಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಮತಗಳವು’ ಆರೋಪ ಮಾಡಿದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಆದ್ದರಿಂದ ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಸೋತರೆ ಮತಗಳವು ಆರೋಪವನ್ನು ಕಾಂಗ್ರೆಸ್ ಮಾಡಬಹುದು.
ಸಂಸದರ ಪೋಸ್ಟ್: ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿರುವಾಗಲೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಬಿಹಾರದಲ್ಲಿ ಮೋದಿಯವರಿಂದ ‘ಓಟ್ ಚೋರಿ’ ಎಂದು ಒಂದೇ ವಾಕ್ಯವನ್ನು ಬರೆದಿದ್ದು, ಬಿಹಾರ ಚುನಾವಣೆಯಲ್ಲಿ ಸೋತ ಬಳಿಕ ವಿರೋಧ ಪಕ್ಷಗಳ ಪ್ರತಿಕ್ರಿಯೆ ಇದಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ಟ್ರಾಂಗ್ ರೂಂಗೆ ಲಾರಿ ಅಕ್ರಮವಾಗಿ ಬಂದಿದೆ ಎಂದು ಆರ್‌ಜೆಡಿ ಆರೋಪ ಮಾಡಿತ್ತು. ಈಗ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇವಿಎಂ ದೂರುವುದಿಲ್ಲ. ‘ಓಟ್ ಚೋರಿ’ ನಡೆದಿದೆ ಎಂದು ಹೇಳುತ್ತವೆ ಎಂದು ಸಂಸದರು ಪೋಸ್ಟ್ ಮೂಲಕ ಹೇಳಿದ್ದಾರೆ.
ಯಾರಿಗೆ ಎಷ್ಟು ಸೀಟು?: ಸಮಯ 10.15ರ ಮಾಹಿತಿಯಂತೆ ಬಿಹಾರದಲ್ಲಿ ಎನ್‌ಡಿಎ 158, ಮಹಾಘಟಬಂಧನ್ 78, ಜನ ಸುರಾಜ್ ಪಕ್ಷ 2, ಇತರರು 5 ಸೀಟುಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಬಿಜೆಪಿ 67, ಆರ್‌ಜೆಡಿ 52, ಜೆಡಿಯು 70, ಕಾಂಗ್ರೆಸ್ 20 ಸೀಟುಗಳಲ್ಲಿ ಮುನ್ನಡೆಯಲ್ಲಿವೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122. ಆದರೆ ಈಗಾಗಲೇ 158 ಸೀಟುಗಳಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆಯಲ್ಲಿದ್ದು, ಚುನಾವಣೆ ಗೆಲುವಿನ ವಿಶ್ವಾಸದಲ್ಲಿದೆ.
ಬಿಹಾರ ಚುನಾವಣೆ ದಿನಾಂಕ ಘೋಷಣೆಗೂ ಮೊದಲು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಚುನಾವಣಾ ಅಕ್ರಮಗಳ ವಿರುದ್ಧ 16 ದಿನಗಳ ‘ವೋಟ್ ಅಧಿಕಾರ ಯಾತ್ರೆ’ಯನ್ನು ರಾಹುಲ್ ಗಾಂಧಿ ನಡೆಸಿದ್ದರು. ಈ ಯಾತ್ರೆಯಲ್ಲಿ ಆರ್‌ಜೆಡಿ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸಿತ್ತು. ಇದನ್ನು ಚುನಾವಣಾ ಆಯೋಗದ ಮೂಲಕ ಬಿಜೆಪಿ ಮಾಡಿಸುತ್ತಿದೆ. ಅರ್ಹರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಈಗ ಚುನಾವಣೆಯಲ್ಲಿ ಮಹಾಘಟಬಂಧನ್ ಸೋತರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮತಗಳವು ಆರೋಪವನ್ನು ಮಾಡುವುದು ನಿಶ್ಚಿತವಾಗಿದೆ. ಆದರೆ ಇಲ್ಲಿಯ ತನಕ ರಾಹುಲ್ ಗಾಂಧಿ ಮಾಡಿದ ಯಾವುದೇ ಮತಗಳವು ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ, ಪತ್ರಿಕಾಗೋಷ್ಠಿ ನಡೆಸಿ ಸುಮ್ಮನಾಗುತ್ತಾರೆ.
ಕಾಂಗ್ರೆಸ್ ಮಹಾಘಟಬಂಧನ್ ಮೈತ್ರಿಕೂಟದ ಮೂಲಕ ಬಿಹಾರದಲ್ಲಿ ಚುನಾವಣೆ ಎದುರಿಸಿದರೂ ಸಹ ಪಕ್ಷ 243 ಸೀಟುಗಳ ಪೈಕಿ ಕಣಕ್ಕಿಳಿದಿರುವುದು 61 ಸೀಟುಗಳಲ್ಲಿ ಮಾತ್ರ. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ 19 ಸೀಟುಗಳಲ್ಲಿ ಜಯಗಳಿಸಿತ್ತು. ಈ ಬಾರಿ ಅಷ್ಟು ಸೀಟುಗಳು ಸಹ ಕಾಂಗ್ರೆಸ್‌ಗೆ ಸಿಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಮತ ಎಣಿಕೆ ಮುಂದುವರೆದಿದ್ದು ಯಾರಿಗೆ ಎಷ್ಟು ಸೀಟು? ಎಂದು ತಿಳಿಯಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


