“ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮುಖ್ಯವಾಗಿದೆ. ವೃತ್ತಿ ಕೌಶಲ್ಯ, ನೈಪುಣ್ಯತೆ ಪಡೆಯಲು ತರಬೇತಿ ಅಗತ್ಯವಾಗಿದೆ” ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಘಟಕ ಜಂಟಿಯಾಗಿ ಎಚ್.ಆರ್.ಎಂ.ಎಸ್ -2, ಇಎಸ್ಆರ್ ಮತ್ತು ಕೆಎಸ್ಎಸ್ ಯೋಜನೆ ಕುರಿತು ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳ ಡಿಡಿಓ, ಇಎಸ್ಟಿ, ಅಧಿಕಾರಿಗಳಿಗೆ, ಪದಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
“ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಜನಪರ ಕಾರ್ಯಕ್ರಮಗಳನ್ನು ಹಾಗೂ ಕಲ್ಯಾಣ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಧಾರವಾಡ ಜಿಲ್ಲೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಇದಕ್ಕೆ ನಮ್ಮ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರ ಸಕ್ರೀಯ ಪಾಲ್ಗೋಳ್ಳುವಿಕೆ ಮತ್ತು ಅನುಷ್ಠಾನದಲ್ಲಿನ ಬದ್ಧತೆ ಕಾರಣವಾಗಿದೆ” ಎಂದರು.
“ಸರ್ಕಾರಿ ನೌಕರರ ಎಲ್ಲಾ ಬೇಡಿಕೆಗಳಿಗೆ ಜಿಲ್ಲಾಡಳಿತವು ಸದಾ ಕಾಲಾ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ವೃತ್ತಿಯಲ್ಲಿ ವಿಶೇಷ ಕೌಶಲ್ಯ ಹಾಗೂ ನೈಪುಣ್ಯತೆಯನ್ನು ಪಡೆಯಲು ಕಾಲಕಾಲಕ್ಕೆ ಅಗತ್ಯ ತರಬೇತಿಗಳು ನೀಡುವುದು ಅವಶ್ಯವಾಗಿದೆ” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
“ಇತ್ತೀಚೆಗೆ ಜಿಲ್ಲೆಯಲ್ಲಿ ಕೈಗೊಂಡ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ನೌಕರರಿಗೆ ಗೌರವ ಧನ ನೀಡಲು ಸರ್ಕಾರದಿಂದ ಈಗಾಗಲೇ ಜಿಲ್ಲೆಗೆ ಸುಮಾರು 7 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಆಯಾ ತಹಶೀಲ್ದಾರ್ಗಳಿಗೆ ಸಮೀಕ್ಷೆ ಕೈಗೊಂಡ ಸಿಬ್ಬಂದಿಗಳಿಗೆ ಗೌರವಧನ ಬಿಡುಗಡೆ ಮಾಡಲು ಸೂಚಿಸಲಾಗಿದೆ” ಎಂದರು.
“ಸಮೀಕ್ಷೆಯ ಸಮಯದಲ್ಲಿ ಆಕಸ್ಮಿಕವಾಗಿ ಅಪಘಾತ ಹಾಗೂ ಅವಘಡಗಳಿಗೆ ಒಳಗಾಗಿ ಅನಾರೋಗ್ಯ ಪಿಡಿತರಾದ ಸಿಬ್ಬಂದಿಗಳಿಗೆ ರಜೆ ಹಾಗೂ ವೈಧ್ಯಕೀಯ ವೆಚ್ಚ ನೀಡಲು ಶಿಕ್ಷಕರ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕೆಸಿಎಸ್ಆರ್ ನಿಯಮಾವಳಿ ಪ್ರಕಾರ ತಕ್ಷಣ ವಿಶೇಷ ರಜೆ ಮಂಜೂರು ಮಾಡಿ, ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಗಳಿಗೆ ಅನುಕೂಲ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ” ಎಂದು ವಿವರಣೆ ನೀಡಿದರು.
“ರಜೆ ಮಂಜೂರು ಮಾಡಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಅನಾರೋಗ್ಯ ಪೀಡಿತರ ವೈದ್ಯಕೀಯ ವೆಚ್ಚದ ಬಿಲ್ಲಗಳನ್ನು ತಕ್ಷಣ ಹೊಂದಾಣಿಕೆ ಮಾಡಿ, ಅವರಿಗೆ ಮರುಪಾವತಿ ಆಗುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗೆ ಮತ್ತು ಡಿಡಿಪಿಐ ಅವರಿಗೆ ಸೂಚಿಸಲಾಗಿದೆ” ಎಂದು ಜಿಲ್ಲಾಧಿಕಾರಿಗಳು ಹೇಳಿದರು.
“ರಾಜ್ಯ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಯಡಿ ಈಗಾಗಲೇ ಜಿಲ್ಲೆಯ ವಿಶೇಷವಾಗಿ ಹುಬ್ಬಳ್ಳಿಯ 13 ಆಸ್ಪತ್ರೆಗಳು ನೋಂದಣಿಯಾಗಿವೆ. ಐದು ಆಸ್ಪತ್ರೆಗಳು ನೋಂದಣಿಯಾಗಲು ಒಪ್ಪಿಗೆ ನೀಡಿವೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರ ಕುಟುಂಬ ಸದಸ್ಯರು ಅವಳಿ ನಗರದಲ್ಲಿ ವಾಸಿಸುತ್ತಿರುವದರಿಂದ ಮತ್ತು ಧಾರವಾಡ ಹುಬ್ಬಳ್ಳಿ ನಗರಗಳಲ್ಲಿ ಹೆಚ್ಚು ಸೌಲಭ್ಯ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಆಸ್ಪತ್ರೆಗಳಿರುವದರಿಂದ ಆರೋಗ್ಯ ಸಂಜೀವಿನಿ ಯೋಜನೆಯಡಿ ಒಳಪಡುವುದು ಅಗತ್ಯವಿದೆ” ಎಂದರು.
“ಈಗಾಗಲೇ ತಾವು ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಆರೋಗ್ಯ ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲಿಸಲಾಗಿದೆ. ಮುಂದಿನ ವಾರದಲ್ಲಿ ಧಾರವಾಡ ನಗರದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಹಾಗೂ ಧಾರವಾಡದ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಜಿಲ್ಲಾಡಳಿತ ಸಭೆ ನಡೆಸಿ, ಮಾಹಿತಿ ನೀಡಿ ಹೆಚ್ಚಿನ ಆಸ್ಪತ್ರೆಗಳು ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವಂತೆ ಕ್ರಮವಹಿಸಲಾಗುವುದು. ಸರ್ಕಾರಿ ನೌಕರರ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯವಾಗಿರುವದರಿಂದ ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿಯಿಂದ ಕಾರ್ಯ ಮಾಡಲಿದೆ” ಎಂದು ಭರವಸೆ ಕೊಟ್ಟರು.
“ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತಮ್ಮ ಕಾರ್ಯಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಸಂಪೂರ್ಣ ತಿಳುವಳಿಕೆ ಇರಬೇಕು. ಆಧುನಿಕ ತಂತ್ರಜ್ಞಾನದ ಬಳಕೆಯು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಆಧುನಿಕ ತಂತ್ರಜ್ಞಾನದ ಬಳಕೆಯು ಸರ್ಕಾರಿ ಕಾರ್ಯವೈಖರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದೆ. ಎಚ್ಆರ್ಎಮ್ಎಸ್-2 (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ), ಇಎಸ್ಆರ್ (ನೌಕರರ ಸೇವಾ ದಾಖಲೆ) ಮತ್ತು ಕೆ-2 (ಖಜಾನೆ-2) ನಂತಹ ತಂತ್ರಾಂಶಗಳು ಆಡಳಿತವನ್ನು ಸರಳೀಕರಿಸಲು, ಪಾರದರ್ಶಕಗೊಳಿಸಲು ಮತ್ತು ದಕ್ಷತೆಯನ್ನು ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿವೆ” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
“ಈ ತರಬೇತಿಯು ನೌಕರರಿಗೆ ತಂತ್ರಾಂಶಗಳ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ. ಆದ್ದರಿಂದ, ತರಬೇತಿಯ ಸದುಪಯೋಗವನ್ನು ಪಡೆದುಕೊಂಡು, ತಮ್ಮ ದೈನಂದಿನ ಕೆಲಸಗಳಲ್ಲಿ ಈ ತಂತ್ರಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ತಂತ್ರಾಂಶಗಳ ಬಗ್ಗೆ ಸರಿಯಾದ ಅರಿವು ಮತ್ತು ಅವುಗಳನ್ನು ಬಳಸುವ ಕೌಶಲ್ಯವು ನೌಕರರಿಗೆ ಅನಿವಾರ್ಯವಾಗಿದೆ. ಈ ಕಾರ್ಯಾಗಾರವು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ” ಎಂದರು.
“ನೌಕರರು ಕಾಲಕ್ಕೆ ತಕ್ಕಂತೆ ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ನವೀಕರಿಸಿಕೊಳ್ಳಬೇಕು. ಇಂದಿನ ವೇಗದ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಪದ್ಧತಿಗಳು ನಿರಂತರವಾಗಿ ಬದಲಾಗುತ್ತಿವೆ. ಈ ಬದಲಾವಣೆಗಳಿಗೆ ತಕ್ಕಂತೆ ಸರ್ಕಾರಿ ನೌಕರರು ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳುವುದು ಅತ್ಯಗತ್ಯ. ಇಲ್ಲವಾದರೆ, ಔಟ್ಡೇಟ್ ಆಗುವ ಅನಿವಾರ್ಯತೆಗೆ ಸಿಲುಕಬೇಕಾಗುತ್ತದೆ” ಎಂದು ವಿವರಣೆ ನೀಡಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, “ನೌಕರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಪ್ರಯತ್ನದಿಂದ ರಾಜ್ಯ ಸರಕಾರದ ಎಚ್.ಆರ್.ಎಂ.ಎಸ್ ಘಟಕದಿಂದ ತರಬೇತಿ ಆಯೋಜಿಸಲಾಗಿದೆ. ಇಂದಿನ ದಿನದಲ್ಲಿ ಎಲ್ಲ ನೌಕರರಿಗೂ ಕೆ.ಎಸ್.ಎಸ್., ಎಚ್.ಆರ್.ಎಂ.ಎಸ್ ಕುರಿತು ತರಬೇತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘ ಕ್ರಮವಹಿಸಿದೆ” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


