ಬಿಹಾರ ವಿಧಾನಸಭೆ ಚುನಾವಣೆಯ ಮತಎಣಿಕೆ ಕಾರ್ಯ ಚಾಲ್ತಿಯಲ್ಲಿದ್ದು, ಎನ್ಡಿಎ ಮೈತ್ರಿ ಮತ್ತೆ ಅಧಿಕಾರಿ ಹಿಡಿಯುವುದು ಬಹುತೇಕ ಖಾತರಿಯಾಗಿದೆ. ಬಿಜೆಪಿ-ಜೆಡಿಯು ಸೇರಿದಂತೆ ಎನ್ಡಿಎ ಮೈತ್ರಿಕೂಟ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಅತ್ತ ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಭಾರಿ ಹಿನ್ನೆಡೆಯಾಗಿದೆ. ಅಲ್ಲದೆ ಬಿಜೆಪಿ ಬಿಹಾರ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹಾದಿಯಲ್ಲಿದೆ ಎಂದು ಚುನಾವಣಾ ಆಯೋಗದ ಫಲಿತಾಂಶ ವರದಿಯು ಸೂಚಿಸುತ್ತಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 190ಕ್ಕೂ ಅಧಿಕ ಸ್ಥಾನಗಳಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದೆ. 2025ರ ಚುನಾವಣೆಯಲ್ಲಿ ಬಿಜೆಪಿ 101 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆ ಮೂಲಕ ಪ್ರಬಲ ರಾಜಕೀಯ ಶಕ್ತಿಯಾಗಿ ತನ್ನ ಬಲ ಪ್ರದರ್ಶನ ಮಾಡಿದೆ.
ಇನ್ನು ಅಂಚೆ ಮತ ಎಣಿಕೆ ಮುಕ್ತಾಯದ ಹಂತಕ್ಕೆ ಶತಕ ಬಾರಿಸಿ ಪೈಪೋಟಿಯ ಭರವಸೆ ಮೂಡಿಸಿದ್ದ ಮಹಾಘಟ್ಬಂಧನ್ ಬಳಿಕ ನೆಲ ಕಚ್ಚಿದ್ದು, 40+ ಸೀಟುಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ. ಈ ಬೃಹತ್ ಮುಖಭಂಗವನ್ನು ತಂದಿಟ್ಟ ಫಲಿತಾಂಶದ ಬಗ್ಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದ್ದು, ಒಂದೇ ಸಾಲಿನಲ್ಲಿ ಉತ್ತರ ಕೊಟ್ಟು ಮುಗಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಬಿಹಾರ ಚುನಾವಣೆಯಲ್ಲಿ ಮತದಾರರು ಏನೇ ತೀರ್ಪು ಕೊಟ್ಟಿದ್ದರೂ ಅದಕ್ಕೆ ನಾನು ತಲೆ ಬಾಗುತ್ತೇನೆ ಎಂದಿದ್ದಾರೆ. ಈ ಮೂಲಕ ತಮ್ಮದೇ ಪಕ್ಷ ಮಾಡುತ್ತಾ ಬಂದಿದ್ದ ವೋಟ್ ಚೋರಿ ಕುರಿತು ದನಿ ಎತ್ತದ ಡಿಕೆಶಿ ಮತದಾರನ ತೀರ್ಪೇ ಅಂತಿಮ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ಡಿಎ ಯಾಕೆ ಇಷ್ಟು ದೊಡ್ಡ ಮುನ್ನಡೆ ಸಾಧಿಸಿತು ಎಂಬುದನ್ನು ತಿಳಿದುಕೊಳ್ಳುವೆ ಎಂದಿದ್ದರು. ಅಲ್ಲದೇ ವೋಟ್ ಚೋರಿ ಕುರಿತು ಕೇಳುತ್ತಿದ್ದಂತೆ ವೋಟ್ ಚೋರಿ ಮಾಡಿದ್ದಾರಲ್ಲ ಎಂದು ಪ್ರತಿಕ್ರಿಯೆ ನೀಡಿ ಆರೋಪ ಹೊರಿಸಿದ್ದರು.
ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲಿನತ್ತ ಕಾಂಗ್ರೆಸ್: ವೋಟ್ ಚೋರಿ ಮಾಡಿದ್ದಾರಲ್ಲ; ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


