ಬಿಹಾರ ವಿಧಾನಸಭೆ ಚುನಾವಣೆ 2025ರಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಸದ್ಯದ ಮಾಹಿತಿಯಂತೆ ಎನ್‌ಡಿಎ ಮೈತ್ರಿಕೂಟ 200 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122.
ಬಿಹಾರ ರಾಜ್ಯದ 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಶುಕ್ರವಾರ ಮತ ಎಣಿಕೆ ನಡೆಯುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಬಂಧನ್ 36 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ 4 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದು, ತೀವ್ರ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದು. ಆದರೆ ಬಿಹಾರದ ಪಕ್ಷದ ಹೀನಾಯ ಪರಿಸ್ಥಿತಿ ರಾಜ್ಯ ರಾಜಕೀಯ ಚಟುವಟಿಕೆ ತಣ್ಣಗೆ ಮಾಡಿದೆ.
ಸಿದ್ದರಾಮಯ್ಯ Safe: ನವೆಂಬರ್ ಕ್ರಾಂತಿ, ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ನಾಯಕತ್ವ ಬದಲಾವಣೆ ಸೇರಿದಂತೆ ಕರ್ನಾಟಕ ಕಾಂಗ್ರೆಸ್‌ನ ಎಲ್ಲಾ ಚಟುವಟಿಕೆ ಸ್ಥಬ್ತವಾಗಲಿದೆ.
ನವೆಂಬರ್ 20ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಲಿದ್ದು, ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿತ್ತು. ಆದರೆ ಬಿಹಾರದ ಹೀನಾಯ ಸೋಲಿನ ಕಾರಣ ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ Safe.
ಅಧಿಕಾರದಲ್ಲಿರುವ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಂತಹ ಮಹತ್ವದ ಬದಲಾವಣೆಯನ್ನು ಮಾಡುವ ದುಸ್ಸಾಹಸಕ್ಕೆ ಕಾಂಗ್ರೆಸ್ ಪಕ್ಷ ಸದ್ಯಕ್ಕೆ ‘ಕೈ’ ಹಾಕುವುದಿಲ್ಲ ಎಂಬುದು ಖಚಿತವಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರ ಖುರ್ಚಿ ಸದ್ಯಕ್ಕೆ ಭದ್ರವಾಗಿದೆ.
ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದ ಬಳಿಕ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಈ ಕುರಿತು ಹೈಕಮಾಂಡ್ ನಾಯಕರ ಮುಂದೆ ತೀರ್ಮಾನವಾಗಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ವೈರಲ್.
ಆದರೆ ಈ ಕುರಿತು ಯಾವುದೇ ಹೈಕಮಾಂಡ್ ನಾಯಕರು ಸಹ ಮಾತನಾಡಿಲ್ಲ. ಈಗ ಬಿಹಾರ ಚುನಾವಣೆಯ ಈ ಮಟ್ಟಿಗಿನ ಸೋಲಿನ ಬಳಿಕ ನಾಯಕತ್ವ ಬದಲಾವಣೆಯಂತಹ ಕಾರ್ಯಕ್ಕೆ ಹೈಕಮಾಂಡ್ ಚಿಂತನೆ ಸಹ ನಡೆಸುವುದಿಲ್ಲ. ಆದ್ದರಿಂದ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.
ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಸುದ್ದಿಯನ್ನು ತೇಲಿ ಬಿಟ್ಟರು. ಹಲವು ಶಾಸಕರು ಈ ಕುರಿತು ಬಹಿರಂಗ ಹೇಳಿಕೆ ನೀಡಿ ಪಕ್ಷದಿಂದ ಶೋಕಾಸ್ ನೋಟಿಸ್ ಪಡೆದರು. ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಸುದ್ದಿಯನ್ನು ಹಬ್ಬಿಸಿದರು.
ಸದ್ಯ ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಲ್ಲಾ ಬೆಳವಣಿಗೆಯನ್ನು ಕೈ ಬಿಟ್ಟು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದ್ದಾರೆ. ಕರ್ನಾಟಕದ ರಾಜಕೀಯದ ಕುರಿತು ಯಾವುದೇ ದೂರು ಬಂದರೂ ಸಹ ಹೈಕಮಾಂಡ್ ನಾಯಕರು ಮೌನಕ್ಕೆ ಶರಣಾಗಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದವರೇ. ಈಗ ರಾಷ್ಟ್ರಮಟ್ಟದಲ್ಲಿ ಪಕ್ಷದ ಪರಿಸ್ಥಿತಿಯನ್ನು ನೋಡಿ ಬೇರೆ ರಾಜ್ಯದಲ್ಲಿ ಅದರಲ್ಲೂ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿ ಯಾವುದೇ ಬದಲಾವಣೆಗೆ ಹೈಕಮಾಂಡ್ ಮುಂದಾಗುವುದಿಲ್ಲ.
ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ. ಆದ್ದರಿಂದ ಸದ್ಯದ ಮಟ್ಟಿಗೆ ಕರ್ನಾಟಕ ಕಾಂಗ್ರೆಸ್‌ನ ಎಲ್ಲಾ ಚಟುವಟಿಕೆಗಳಿಗೆ ವಿರಾಮ ಬೀಳಲಿದೆ. 2020ರಲ್ಲಿ ಬಿಹಾರದಲ್ಲಿ 19 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಅಲ್ಲಿ 5 ಸೀಟುಗಳನ್ನು ಗೆಲ್ಲುವುದು ಕಷ್ಟವಾಗಿದೆ.
ಬಿಹಾರ ಚುನಾವಣೆ ಫಲಿತಾಂಶ ನೋಡಿದ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಶಾಸಕರು, ಸಚಿವರು ಸದ್ಯಕ್ಕೆ ಮಹತ್ವದ ಬದಲಾವಣೆ ರಾಜ್ಯದಲ್ಲಿ ಆಗುವುದಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಿಹಾರದ ಸೋಲಿನ ಕುರಿತು ಕಾಂಗ್ರೆಸ್ ವಲಯದಲ್ಲಿ ಆತ್ಮಾವಲೋಕನ ಆಗಬೇಕಾದ ಅಗತ್ಯವಿದೆ.
ಸಿಎಂ ಸಿದ್ದರಾಮಯ್ಯ ನವೆಂಬರ್ 15ರ ಬಳಿಕ ದೆಹಲಿ ಪ್ರವಾಸ ಕೈಗೊಂಡಿದ್ದರು. ಸಂಪುಟ ಪುನಾರಚನೆ ಕುರಿತು ಅವರು ಹೈಕಮಾಂಡ್ ನಾಯಕರ ಜೊತೆ ಚರ್ಚಿಸಬೇಕಿತ್ತು. ಆದರೆ ಶುಕ್ರವಾರದ ಫಲಿತಾಂಶ ನೋಡಿದರೆ ಸಿದ್ದರಾಮಯ್ಯ ದೆಹಲಿ ಪ್ರವಾಸ ಸಹ ಮುಂದೂಡಿಕೆಯಾಗುವ ನಿರೀಕ್ಷೆ ಇದೆ.
ಕಳೆದ ವಾರ ದೆಹಲಿಯಲ್ಲಿ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್,”ನವೆಂಬರ್ ಅಥವಾ ಡಿಸೆಂಬರ್ ಅಥವಾ ಜನವರಿ ಅಥವಾ ಫೆಬ್ರವರಿಯಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028ರಲ್ಲಿ. ಅದು ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ” ಎಂದು ಹೇಳಿದ್ದರು.
ಈಗ ಬಿಹಾರದ ಸೋಲು ಕಾಂಗ್ರೆಸ್ ಪಕ್ಷವನ್ನು ಕಂಗೆಡಿಸುವುದು ಮಾತ್ರ ಸುಳ್ಳಲ್ಲ. ಆದ್ದರಿಂದ ಕರ್ನಾಟಕ ರಾಜಕೀಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಪಕ್ಷ ತೀರ್ಮಾನ ಮಾಡುತ್ತದೆ. ಆದ್ದರಿಂದ ನವೆಂಬರ್ ಕ್ರಾಂತಿ ಆಗುವುದಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


