ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ದಿನದಿಂದ ದಿನಕ್ಕೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಎಸ್‌ಐಟಿ ಅಧಿಕಾರಿಗಳು ಹಲವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಸದ್ಯ ವಿಠಲ ಗೌಡ ಬಂಗ್ಲೆ ಗುಡ್ಡದಲ್ಲಿ ರಾಶಿ ರಾಶಿ ಅಸ್ತಿಪಂಜರಗಳಿವೆ ಎಂದು ನೀಡಿರುವ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದ್ದು, ಎಲ್ಲರ ಚಿತ್ತ ಬಂಗ್ಲೆ ಗುಡ್ಡದತ್ತ ನೆಟ್ಟಿದೆ.
ಒಂದೆಡೆ ಎಸ್‌ಐಟಿ ತನಿಖೆಯ ಕುರಿತಾಗಿ ಚರ್ಚೆಗಳು ಹಾಗೂ ಸುದ್ದಿಗಳು ಹರಿದಾಡುತ್ತಿದ್ದರೆ, ಮತ್ತೊಂದೆಡೆ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಕುರಿತಾಗಿ ಸುದ್ದಿ ಮಾಡುವ ವಿಚಾರವಾಗಿ ಯುಟ್ಯೂಬರ್‌ಗಳು ಕಿತ್ತಾಟದಲ್ಲಿ ಮುಳುಗಿದ್ದಾರೆ.
ಅದರಲ್ಲೂ ಸುಮಂತ್ ಎಂಬ ಯುಟ್ಯೂಬರ್‌ನದ್ದು ಎನ್ನಲಾದ ಆಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದು, ಈತ ಧರ್ಮಸ್ಥಳದ ವಿರುದ್ಧ ವಿಡಿಯೊ ಮಾಡಲು ಚಂದನ್ ಗೌಡ ಹಣ ಪಡೆದಿದ್ದರು, ಅಭಿಷೇಕ್ ಹಣ ನೀಡುತ್ತೇನೆ ಎಂದಿದ್ದರು ಎಂದು ನೀಡಿದ ಹೇಳಿಕೆಗಳನ್ನು ಆರಂಭದಲ್ಲಿ ನಂಬಿದ್ದ ಜನ ಈಗ ಈತನನ್ನು ಸಂಶಯಾಸ್ಪದವಾಗಿ ನೋಡುವಂತಹ ಪರಿಸ್ಥಿತಿ ಬಂದಿದೆ.
ತುಮಕೂರು ಮೂಲದ ತನ್ನ ಸ್ನೇಹಿತ ಚೇತನ್ ಜತೆಗೆ ಸುಮಂತ್ ಮಾತನಾಡಿರುವ ಆಡಿಯೊಗಳು ಹೊರಬಿದ್ದಿದ್ದು, ಇದರಲ್ಲಿ ಧರ್ಮಸ್ಥಳದಲ್ಲಿ ಯುಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಬಗ್ಗೆ ಸುಮಂತ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾನೆ.
13ನೇ ಗುಂಡಿ ತೆಗೆಯುವ ಸಮಯದಲ್ಲಿ ಅಲ್ಲಿ ಏನೂ ಸಿಗದ ಕಾರಣ ರೊಚ್ಚಿಗೆದ್ದು ಗಲಾಟೆ ಮಾಡಿ ಎಸ್‌ಐಟಿ ತನಿಖೆಯನ್ನು ಜನರು ವಿರೋಧಿಸುತ್ತಿದ್ದಾರೆ ಎಂದು ತನಿಖೆ ನಿಲ್ಲಿಸುವ ಪ್ಲಾನ್ ನಡೆದಿತ್ತು. ಆದರೆ ಅಂದು ಗುಂಡಿ ಅಗೆಯಲಿಲ್ಲ ಹೀಗಾಗಿ ಯುಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆಯ ಪ್ಲಾನ್ ಸರಿಯಾಗಿ ಕೆಲಸ ನಿರ್ವಹಿಸಲಿಲ್ಲ ಎಂದ ಸುಮಂತ್ ಹಲ್ಲೆ ಮಾಡಲಿದ್ದಾರೆ ಎಂಬ ವಿಷಯ ತನಗೆ ಮೊದಲೇ ತಿಳಿದಿತ್ತು ಎಂದು ಹೇಳಿಕೊಂಡಿದ್ದಾನೆ.
ಈ ಸಂದರ್ಭದಲ್ಲಿ ಸುಮಂತ್ ಸ್ನೇಹಿತ ಚೇತನ್ ಒಂದುವೇಳೆ ಆ ಜಾಗದಲ್ಲಿ ಸಮೀರ್ ಇದ್ದಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನೆಯನ್ನು ಹಾಕಿದ್ದು, ಇದಕ್ಕೆ ಉತ್ತರಿಸಿದ ಸುಮಂತ್ ಸಮೀರ್ ಇದ್ದಿದ್ದರೆ ಸಾಯಿಸಿ ದೊಂಬಿ ಗಲಾಟೆ ಎಂದು ಕೇಸ್ ಕ್ಲೋಸ್ ಮಾಡುತ್ತಿದ್ದರು ಎಂದು ಗಂಭೀರವಾದ ಹೇಳಿಕೆಯನ್ನು ನೀಡಿದ್ದಾನೆ.
ಎಂಜಿನಿಯರ್ಸ್ ದಿನದಂದು ತಂತ್ರಜ್ಞರಿಗೆ ಶುಭಾಶಯ ಕೋರಿದ ಮೋದಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


