ದುಬೈ: ನಿನ್ನೆ ( ಸೆಪ್ಟೆಂಬರ್ 14 ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ 2025 ( Asia Cup 2025 ) ಟೂರ್ನಿಯ ಗ್ರೂಪ್ ಹಂತದ ಆರನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಜಯ ಕಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಕಲೆಹಾಕಿ ಭಾರತಕ್ಕೆ 128 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಸಫಲವಾದ ಟೀಮ್ ಇಂಡಿಯಾ 15.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಕಲೆಹಾಕಿತು.
ಇನ್ನು ಈ ಪಂದ್ಯ ಮುಗಿದ ಬಳಿಕ ಭಾರತದ ಆಟಗಾರರು ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದೆಯೇ ಡ್ರೆಸಿಂಗ್ ರೂಮ್ಗೆ ತೆರಳಿದರು. ಇದು ಪಾಕ್ ಆಟಗಾರರಿಗೆ ಅನಿರೀಕ್ಷಿತವಾಗಿತ್ತು ಹಾಗೂ ಬೇಸರವನ್ನೂ ಸಹ ಉಂಟುಮಾಡಿತು. ಇತ್ತ ಭಾರತದ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಜತೆಗೆ ಕ್ರೀಡಾಸ್ಪೂರ್ತಿಯನ್ನು ಉಲ್ಲೇಖಿಸಿ ಟೀಕೆಗಳೂ ಸಹ ಕೇಳಿಬಂದವು.
ಹೀಗೆ ಪಂದ್ಯ ಮುಗಿದ ಬಳಿಕ ಮುಖಭಂಗ ಅನುಭವಿಸಿದ್ದ ಪಾಕ್ ಆಟಗಾರರಿಗೆ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಸಹ ಅನಿರೀಕ್ಷಿತ ಘಟನೆಯೊಂದು ಎದುರಾಗಿತ್ತು. ಪಾಕಿಸ್ತಾನದ ರಾಷ್ಟ್ರಗೀತೆ ಪ್ರಸಾರ ಮಾಡುವ ಬದಲು ಕ್ರೀಡಾಂಗಣದ ಡಿಜೆ ಪಂಜಾಬ್ – ಕೆನಡಿಯನ್ ಆಲ್ಬಂ ಹಾಡಾದ ಜಲೇಬಿ ಬೇಬಿ ಹಾಡನ್ನು ಪ್ರಸಾರ ಮಾಡಿದ್ದರು. ಆಕಸ್ಮಿಕವಾಗಿ ಹಾಡನ್ನು ಹಾಕಿದ ಕೂಡಲೇ ಎಚ್ಚೆತ್ತುಕೊಂಡ ಡಿಜೆ ತತ್ಕ್ಷಣದಲ್ಲೇ ಹಾಡನ್ನು ನಿಲ್ಲಿಸಿ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದರು.
ಹೀಗೆ ಜಲೇಬಿ ಲೇಡಿ ಬೇಬಿ ಹಾಡು ಪ್ರಸಾರವಾಗುತ್ತಿದ್ದಂತೆ ಎದೆ ಮೇಲೆ ಕೈ ಇಟ್ಟು ರಾಷ್ಟ್ರಗೀತೆ ಹಾಡಲು ಸಜ್ಜಾಗಿದ್ದ ಪಾಕಿಸ್ತಾನದ ಆಟಗಾರರು ಕೆಲಕಾಲ ಗೊಂದಲಕ್ಕೊಳಗಾದರು.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


