ಪುತ್ತೂರು: ಪಾಲಕರಿಗೆ ತಿಳಿಯದಂತೆ ಮಗು ಕಾಡಿಗೆ ಡಬ್ಬ ನುಂಗಿ ಗಂಟಲಿನಲ್ಲಿ ಸಿಲುಕಿ ಸಮಸ್ಯೆಯಿಂದ ಬಳಲುತ್ತಿದ್ದು, ವರ್ಷದ ಬಳಿಕ ಪುತ್ತೂರಿನ ವೈದ್ಯರು ಅದನ್ನು ಯಶಸ್ವಿ ಯಾಗಿ ಹೊರತೆಗೆದಿದ್ದಾರೆ.
ಬೆಂಗಳೂರಿನ ಮಂಜು ಮತ್ತು ವಿಶಾಲಾಕ್ಷಿ ದಂಪತಿಯ ಒಂದೂವರೆ ವರ್ಷದ ಮಗು ಆರ್ಯನ್, ವರ್ಷದ ಹಿಂದೆ ಸಣ್ಣ ಕಾಡಿಗೆ ಡಬ್ಬವನ್ನು ನುಂಗಿದ್ದ. ಇದು ಪಾಲಕರ ಅರಿವಿಗೆ ಬಂದಿರಲಿಲ್ಲ. ಮಗು ಊಟ ಮಾಡಲು, ನೀರು ಕುಡಿಯಲು ಕಷ್ಟಪಡುತ್ತಿದ್ದು, ಮಾತು ಹೊರಡದೆ ಯಾತನೆ ಅನುಭವಿಸುತ್ತಿತ್ತು. ಕಫದ ಸಮಸ್ಯೆ ಎಂದು ಭಾವಿಸಿದ ಪಾಲಕರು ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಫಲಕಾರಿಯಾಗಿರಲಿಲ್ಲ. ಸೋಮವಾರ ಮಗುವಿನ ತಾಯಿ ವಿಶಾಲಾಕ್ಷಿ ಪುತ್ತೂರು ನೆಹರು ನಗರದಲ್ಲಿರುವ ಸಹೋದರಿ ಮನೆಗೆ ಬಂದಿದ್ದರು.
ಮಗುವಿಗೆ ಸತತ ಕೆಮ್ಮು ಮತ್ತು ಕಫದ ಸಮಸ್ಯೆ ಇದೆ ಎಂದು ಚಿಕಿತ್ಸೆಗೆ ಮಕ್ಕಳ ತಜ್ಞೆ ಡಾ.ಅರ್ಚನಾ ಕರಿಕ್ಕಳ ಅವರನ್ನು ಭೇಟಿ ಮಾಡಿದ್ದರು. ಪರೀಕ್ಷಿಸಿದ ವೈದ್ಯರು ಮಗುವಿನ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಇಎನ್‌ಟಿ ತಜ್ಞ ಡಾ.ರಾಮಮೋಹನ್ ಬಳಿ ಕಳುಹಿಸಿದರು. ಡಾ.ರಾಮಮೋಹನ್ ಮಗುವನ್ನು ಪರೀಕ್ಷಿಸಿದಾಗ ಗಂಟಲಿನಲ್ಲಿ ವಸ್ತು ಸಿಲುಕಿಕೊಂಡಿರುವುದು ಗೋಚರಿಸಿತ್ತು. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಗಂಟಲಿನಲ್ಲಿದ್ದ ಕಾಡಿಗೆ ಡಬ್ಬವನ್ನು ಹೊರತೆಗೆದರು.
ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


