ಬಿಹಾರ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಘೋಷಣೆಯಾಗಿದೆ. ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 202 ಸೀಟುಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಸರ್ಕಾರ ರಚನೆ ಮಾಡಲಿದೆ. ಮೈತ್ರಿಕೂಟದಲ್ಲಿ ಬಿಜೆಪಿ 89, ಜೆಡಿಯು 85 ಸೀಟುಗಳನ್ನು ಪಡೆದಿವೆ.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ನೆಟ್ಟಿಗರು ಸಿಎಂ ನಿತೀಶ್ ಕುಮಾರ್ ಎಷ್ಟು ಮತದಿಂದ ಗೆದ್ದರು?, ಅವರ ಕ್ಷೇತ್ರ ಯಾವುದು?, ಎದುರಾಳಿ ಯಾರು? ಎಂದು ಗೂಗಲ್ ಮೊರೆ ಹೋಗಿದ್ದಾರೆ. 20 ವರ್ಷ ರಾಜ್ಯದ ಆಡಳಿತ ನಡೆಸಿದ ನಾಯಕ ಪಡೆದ ಮತ ಎಷ್ಟು ಎಂದು ಹುಡುಕಾಡಿದ್ದಾರೆ.
74 ವರ್ಷದ ನಿತೀಶ್ ಕುಮಾರ್ ಬಿಹಾರದ ಹಾಲಿ ಸಿಎಂ. ಆದರೆ ಜೆಡಿ(ಯು) ಪಕ್ಷದ ಮುಖ್ಯಸ್ಥರಾದ ಅವರು 2025ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಅವರು ಕೊನೆಯದಾಗಿ ವಿಧಾನಸಭೆ ಸದಸ್ಯರಾಗಿದ್ದು 1985ರಲ್ಲಿ ಹರ್ನೌತ್ ಕ್ಷೇತ್ರದ ಮೂಲಕ.
ನಿತೀಶ್ ಕುಮಾರ್ ಸಿಎಂ: ಈ ಬಾರಿಯ ಚುನಾವಣೆ ಬಳಿಕ ಸಿಎಂ ಆಗಿ ನಿತೀಶ್ ಕುಮಾರ್ ಮುಂದುವರೆಯಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಹಾಲಿ ಸಿಎಂ ನಿತೀಶ್ ಕುಮಾರ್ ಶಾಸಕರಲ್ಲ. ಅವರು ಮೇಲ್ಮನೆ ಸದಸ್ಯ ಅಥವ ವಿಧಾನ ಪರಿಷತ್‌ನ ಸದಸ್ಯರು.
ಪಾಟ್ನಾದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ನಿತೀಶ್ ಕುಮಾರ್ ಎಂದೂ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಅವರು ಮೇಲ್ಮನೆ ಸದಸ್ಯರಾಗಿಯೇ ಮುಂದುವರೆಯುತ್ತಿದ್ದಾರೆ. 1995ರಲ್ಲಿ ನಿತೀಶ್ ಕುಮಾರ್ ಕೊನೆಯದಾಗಿ ವಿಧಾನಸಭೆ ಚುನಾವಣೆಗೆ ಹರ್ನೌತ್ ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಆದರೆ ಸೀಟು ಉಳಿಸಿಕೊಳ್ಳಲು ವಿಫಲರಾದರು.
ಅಂದಿನಿಂದ ನಿತೀಶ್ ಕುಮಾರ್ ವಿಧಾನ ಪರಿಷತ್ ಸದಸ್ಯರಾಗಿಯೇ ಉಳಿದಿದ್ದಾರೆ. 5ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ 2005ರಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ.
ನಿತೀಶ್ ಕುಮಾರ್ ಎರಡು ದಶಕಗಳ ಕಾಲ ಬಿಹಾರ ರಾಜ್ಯವನ್ನು ಆಳಿದ್ದಾರೆ. ಜನರು ಅವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಈ ಬಾರಿ ಎನ್‌ಡಿಎ ಮೈತ್ರಿಕೂಟ 202 ಸೀಟುಗಳಲ್ಲಿ ಗೆಲ್ಲುವ ಮೂಲಕ ಅಭೂತಪೂರ್ವ ಜಯ ಸಾಧಿಸಿರುವುದು ಸಾಕ್ಷಿಯಾಗಿದೆ.
ಕಾಂಗ್ರೆಸ್, ಬಿಜೆಪಿ, ಆರ್‌ಜೆಡಿ ಹೀಗೆ ವಿವಿಧ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಬಿಹಾರವನ್ನು ಆಳಿರುವ ನಿತೀಶ್ ಕುಮಾರ್ ಸಿಎಂ ಹುದ್ದೆಯನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಆದರೆ ಅವರು ನೇರವಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಲಿಲ್ಲ.
ಬಿಹಾರ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ 35 ವರ್ಷಗಳ ಹಿಂದೆಯೇ ಅಂತ್ಯಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ 243 ಸೀಟುಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು 6 ಸೀಟುಗಳು. ಪ್ರಾದೇಶಿಕ ಪಕ್ಷಗಳೇ ಬಿಹಾರದ ಆಡಳಿತದ ಚುಕ್ಕಾಣಿ ಹಿಡಿದಿವೆ. ಇದರಲ್ಲಿ 1990ರ ಬಳಿಕ 15 ವರ್ಷ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಆರ್‌ಜೆಡಿ ಪಕ್ಷ ಅಧಿಕಾರ ಮಾಡಿದೆ. ಕಳೆದ 20 ವರ್ಷಗಳಿಂದ ನಿತೀಶ್ ಕುಮಾರ್ ಸಿಎಂ ಹುದ್ದೆಯಲ್ಲಿದ್ದಾರೆ.
ಲಾಲೂ ಮತ್ತು ನಿತೀಶ್ ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸ್ನೇಹಿತರು. ಜೆಪಿ ಚಳವಳಿ ಮೂಲಕ ಇಬ್ಬರು ಒಟ್ಟಿಗೆ ರಾಜಕೀಯಕ್ಕೆ ಬಂದರು. ಲಾಲೂ ನಿತೀಶ್‌ಗಿಂತ ಹಿರಿಯರು 1990ರಲ್ಲಿ ಅವರು ಮೊದಲ ಬಾರಿಗೆ ಸಿಎಂ ಆದರು. 1994ರಲ್ಲಿ ನಿತೀಶ್ ಕುಮಾರ್ ಮತ್ತು ಜಾರ್ಜ್ ಫರ್ನಾಂಡೀಸ್ ಸಮತಾ ಪಕ್ಷವನ್ನು ಆರಂಭಿಸಿದರು. 10 ವರ್ಷದ ಬಳಿಕ ಲಾಲೂ ಆಡಳಿತ ಅಂತ್ಯಗೊಳಿಸಿ ನಿತೀಶ್ ಸಿಎಂ ಗದ್ದುಗೆ ಏರಿದರು.
ನಿತೀಶ್ ಕುಮಾರ್ 1989 ರಿಂದ 1999ರ ತನಕ ರಾಷ್ಟ್ರ ರಾಜಕಾರಣದಲ್ಲಿದ್ದರು. ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿದರು. 1999ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ನಿತೀಶ್ ಕುಮಾರ್ ಅವರ ಸಮತಾ ಪಕ್ಷ ಬಿಹಾರದಲ್ಲಿ ಮೈತ್ರಿ ಮಾಡಿಕೊಂಡಿತು. 2000ದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯಿತು. ಮೊದಲ ಬಾರಿಗೆ ನಿತೀಶ್ ಸಿಎಂ ಆದರು. ಆದರೆ ಸಂಖ್ಯಾಬಲದ ಕೊರತೆ ಕಾರಣ 7 ದಿನದಲ್ಲಿ ರಾಜೀನಾಮೆ ನೀಡಿದರು.
2005ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ 88 ಸ್ಥಾನ ಗೆದ್ದಿತು. ನಿತೀಶ್ ಸಿಎಂ ಆದರು. ಬಿಹಾರದಲ್ಲಿ ಆಗ ನಿತೀಶ್ ಆಡಳಿತ ಪರ್ವ ಆರಂಭವಾಯಿತು. ಬಳಿಕ ಒಂದು ವರ್ಷ ಹೊರತುಪಡಿಸಿ ಉಳಿದ ಎಲ್ಲಾ ಸಮಯದಲ್ಲಿಯೂ ನಿತೀಶ್ ಕುಮಾರ್ ಸಿಎಂ ಹುದ್ದೆಯಲ್ಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


