ಬೆಂಗಳೂರು ನಗರದ ಆಚೆಗೆ ಸಹ ಐಟಿ ಉದ್ಯಮವನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಉದ್ಯಮಿಗಳಿಗೆ ಆಸ್ತಿ ಸೇರಿದಂತೆ ವಿವಿಧ ತೆರಿಗೆ ಮರು ಪಾವತಿ ಮಾಡುವ ಭರವಸೆಯನ್ನು 2025-30 ಐಟಿ ನೀತಿಯಲ್ಲಿ ನೀಡಿದೆ. ಈ ನೀತಿಯು ಪ್ರಸ್ತಾವನೆ ಹಂತದಲ್ಲಿದ್ದು, ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ.
ಬೆಂಗಳೂರು ಹೊರತುಪಡಿಸಿ ಇತರ ಕಡೆ ಐಟಿ ಉದ್ಯಮ ಸ್ಥಾಪನೆ ಮಾಡಿದರೆ ಕಡಿಮೆ ವೆಚ್ಚ ಎಂಬ ಘೋಷಣೆ ಅಡಿ ಉದ್ಯಮ ಸ್ಥಾಪನೆ ಮಾಡಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ತಂತ್ರಜ್ಞಾನ ಹೂಡಿಕೆಗಳನ್ನು ಸ್ಥಳಾಂತರ ಮಾಡಲು, ಹೊಸ ಹೂಡಿಕೆ ಆಕರ್ಷಣೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಐಟಿ ಕಂಪನಿಗಳ ಕಾರ್ಯಾಚರಣೆ ಪ್ರಾರಂಭವಾದರೆ ನಗರ ಅಭಿವೃದ್ಧಿಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಬೆಂಗಳೂರು ನಗರಕ್ಕೆ ವಲಸೆ ತಪ್ಪುತ್ತದೆ ಎಂಬುದು ಈ ಐಟಿ ನೀತಿಯ ಗುರಿಯಾಗಿದೆ.
ಐಟಿ ಉದ್ಯಮ ಸ್ಥಾಪಿಸಿದರೆ ಕಂಪನಿಗಳಿಗೆ ಮನೆ ಬಾಡಿಗೆ, ಆಸ್ತಿ ತೆರಿಗೆ, ವಿದ್ಯುತ್ ಡ್ಯೂಟಿ ಮತ್ತು ಟೆಲಿಕಾಂ ವೆಚ್ಚಗಳ ಮೇಲೆ ಹಣವನ್ನು ಮರು ಪಾವತಿ ಮಾಡಲಾಗುತ್ತದೆ. ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವ ಐಟಿ ಮತ್ತು ಐಟಿ ಹೋಲುವ ಇತರ ಸೇವೆಗಳ ಘಟಕಗಳು ಶೇ 50 ಪ್ರತಿಶತ ಬಾಡಿಗೆ ಮರುಪಾವತಿಗೆ ಅರ್ಹ (ರೂ. 2 ಕೋಟಿಗೆ ಸೀಮಿತವಾಗಿ) ಎಂದು ಐಟಿ ನೀತಿ ಹೇಳಿದೆ.
ವಿವಿಧ ಪ್ರೋತ್ಸಾಹಕಗಳು: ಅಲ್ಲದೇ ಬಂಡವಾಳ ಹೂಡಿಕೆದಾರರಿಗೆ ಮೂರು ವರ್ಷಗಳಿಗೆ 30 ಪ್ರತಿಶತ ಆಸ್ತಿ ತೆರಿಗೆ ವಾಪಸಾತಿ, ಐದು ವರ್ಷಗಳಿಗೆ 100 ಪ್ರತಿಶತ ವಿದ್ಯುತ್ ಡ್ಯೂಟಿ ರದ್ದು. ಟೆಲಿಕಾಂ ಮತ್ತು ಇಂಟರ್ನೆಟ್ ಚಾರ್ಜ್‌ಗಳ 25 ಪ್ರತಿಶತ ವಾಪಸ್ (ರೂ. 12 ಲಕ್ಷಕ್ಕೆ ಸೀಮಿತವಾಗಿ) ಎಂದು ಹಲವಾರು ಉತ್ತೇಜನಗಳನ್ನು ಘೋಷಣೆ ಮಾಡಲಾಗಿದೆ.
ಇದು ಚಿಕ್ಕ ಮತ್ತು ಮಧ್ಯಮ ವಲಯದ ಕಂಪನಿಗಳ ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆಗೊಳಿಸಲಿದೆ ಎಂದು ಅಂದಾಜಿಸಲಾಗಿದ್ದು, ಇದರಿಂದಾಗಿ ಕರ್ನಾಟಕದ ಹೆಚ್ಚಿನ ಐಟಿ ಕಂಪನಿಗಳು ಬೆಂಗಳೂರು ಹೊರತುಪಡಿಸಿ ಬೇರೆ ನಗರದಲ್ಲಿಯೂ ಕಚೇರಿ ಆರಂಭಕ್ಕೆ ಸಹಕಾರಿ ಎಂದು ನಿರೀಕ್ಷಿಸಲಾಗಿದೆ. ಈ ಐಟಿ ನೀತಿಯ ಪ್ರೋತ್ಸಾಹಕದ ಅನ್ವಯ 5 ವರ್ಷಗಳಲ್ಲಿ ರೂ.445 ಕೋಟಿ ಬಿಡುಗಡೆ ಮಾಡಲಾಗುತ್ತದೆ. ಹಣಕಾಸು ಇಲಾಖೆಯು ರೂ. 345 ಕೋಟಿಗಳನ್ನು ಆರ್ಥಿಕ ಪ್ರೋತ್ಸಾಹಗಳಿಗೆ ಮತ್ತು ರೂ.100 ಕೋಟಿಗಳನ್ನು ಇತರ ವೆಚ್ಚಗಳಿಗಾಗಿ ಅನುಮೋದಿಸಿದೆ.
ಈ ನೀತಿಯಡಿ ಹೊಸ ತಂತ್ರಜ್ಞಾನ ಕೇಂದ್ರಗಳನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ, ಶಿವಮೊಗ್ಗ ಮತ್ತು ದಾವಣಗೆರೆಯಂತಹ ನಗರಗಳಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಇದರಿಂದಾಗಿ ಹೊಸ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸಬಹುದಾಗಿದೆ.
ಸರ್ಕಾರವು ಪ್ರತಿ ಮರುಪಾವತಿ ಸೌಲಭ್ಯಕ್ಕೆ 100 ಅರ್ಜಿದಾರರನ್ನು ಮಿತಿಗೊಳಿಸಲಿದೆ. ಬಾಡಿಗೆ ಮತ್ತು ಆಸ್ತಿ ತೆರಿಗೆ ವಾಪಾಸಾತಿಯ ಮೂಲಕ ಬೆಂಗಳೂರು ಹೊರಗೆ ಐಟಿ ಕಂಪನಿಗಳಿಗೆ ಪ್ರಮುಖ ವೆಚ್ಚ ಕಡಿಮೆ ಮಾಡುವ ಉದ್ದೇಶವಿದೆ. ಅಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳ್ಳುವ ಜೊತೆಗೆ ರಿಯಲ್ ಎಸ್ಟೇಟ್ ಲಾಬಿಗಳಿಗೆ ಕಡಿವಾಣ ಹಾಕಲಾಗುತ್ತದೆ.
ಹೊಸ ಕಂಪನಿಗಳ ಕಾರ್ಯಾಚರಣೆ ವೆಚ್ಚಗಳನ್ನು ಮೊದಲ 3-5 ವರ್ಷಗಳಲ್ಲಿ ಕಡಿಮೆಗೊಳಿಸುವ ಮೂಲಕ, ರಾಜ್ಯವು ಹೊಸ ತಂತ್ರಜ್ಞಾನ ಕ್ಲಸ್ಟರ್‌ಗಳನ್ನು ಬೆಂಗಳೂರು ಹೊರಗೆ ತ್ವರಿತವಾಗಿ ಅನುಷ್ಠಾನಗೊಳಿಸುವ ನಿರೀಕ್ಷೆಯಲ್ಲಿದೆ. ಸದ್ಯ ಕರ್ನಾಟಕದ ಐಟಿ ಬೆಂಗಳೂರು ನಗರ ಕೇಂದ್ರಿತವಾಗಿವೆ. ಉದ್ಯೋಗ ನೇಮಕಾತಿ ಬೆಂಬಲ, ಇಂಟರ್ನ್‌ಶಿಪ್, ಟೆಲಿಕಾಂ ಸಬ್ಸಿಡಿಗಳು ಮುಂತಾದ ಪ್ರೋತ್ಸಾಹ ಕ್ರಮಗಳಿಂದ ಬೆಂಗಳೂರು ಹೊರಗೆ ಐಟಿ ಉದ್ಯಮ ಇನ್ನಷ್ಟು ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಮತ್ತು ರಾಜ್ಯದ ಇತರ ಜಿಲ್ಲೆಯಲ್ಲಿ ಉದ್ಯಮ ಪ್ರೋತ್ಸಾಹಿಸಲು ಏಕಗವಾಕ್ಷಿ ವೇದಿಕೆ ರಚನೆಯನ್ನು ಸಹ ನೀತಿ ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಗಳಿಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


