ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಈ ಸ್ಪೋಟದಲ್ಲಿ 9 ಜನರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಮಾಹಿತಿಗಳ ಪ್ರಕಾರ ಹರಿಯಾಣದ ಫರಿದಾಬಾದ್‌ನಲ್ಲಿ ಉಗ್ರನ್ನು ಬಂಧಿಸಿ, ವಶಪಡಿಸಿಕೊಂಡಿದ್ದ ಸ್ಫೋಟಕಗಳಲ್ಲಿ ಕೆಲವು ಸ್ಫೋಟವಾಗಿದೆ. ಇದೊಂದು ಆಕಸ್ಮಿಕ ಘಟನೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ನಲಿನ್ ಪ್ರಭಾತ್ ಈ ಕುರಿತು ಮಾತನಾಡಿ, “ಪೊಲೀಸ್ ಠಾಣೆ ನೌಗಾಮ್ 2025ರ ಎಫ್‌ಐಆರ್ 162ರ ತನಿಖೆಯಲ್ಲಿ, ನವೆಂಬರ್ 9 ಮತ್ತು 10ರಂದು ಫರೀದಾಬಾದ್‌ನಿಂದ ಭಾರೀ ಪ್ರಮಾಣದ ಸ್ಫೋಟಕ ದ್ರವ್ಯಗಳು, ರಾಸಾಯನಿಕಗಳು ಮತ್ತು ರೀಜೆಂಟ್‌ಗಳು ಸಹ ಪತ್ತೆಯಾಗಿದ್ದವು. ಇದನ್ನು ಸಾಗಿಸಿ ಪೊಲೀಸ್ ಸ್ಟೇಷನ್‌ನ ಮುಕ್ತ ಪ್ರದೇಶದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು” ಎಂದು ಹೇಳಿದ್ದಾರೆ.
“ಮುಂದಿನ ಪ್ರಕ್ರಿಯೆ ಭಾಗವಾಗಿ, ಸ್ಪೋಟಕದ ನಮೂನೆಗಳನ್ನು ಹೆಚ್ಚಿನ ಫೋರೆನ್ಸಿಕ್ ಮತ್ತು ರಾಸಾಯನಿಕ ಪರೀಕ್ಷೆಗೆ ಕಳುಹಿಸಬೇಕಿತ್ತು. ಈ ಪ್ರಕ್ರಿಯೆ ಕಳೆದ 2 ದಿನಗಳಿಂದ ನಡೆಯುತ್ತಿತ್ತು, ಶುಕ್ರವಾರ ಎಫ್‌ಎಸ್‌ಎಲ್ ತಂಡ ಸೂಕ್ಷ್ಮವಾಗಿ ನಮೂನೆಯ ಸಂಗ್ರಹಣೆ ಮತ್ತು ನಿರ್ವಹಣೆಯನ್ನು ಅತ್ಯಂತ ಎಚ್ಚರಿಕೆಯೊಂದಿಗೆ ಮಾಡುತ್ತಿತ್ತು. ಆದರೆ, ದುರಾದೃಷ್ಟವಶಾತ್ ಈ ವೇಳೆ ರಾತ್ರಿ ಸುಮಾರು 11.20ರ ಸಮಯದಲ್ಲಿ, ಒಂದು ಆಕಸ್ಮಿಕ ಸ್ಫೋಟ ಸಂಭವಿಸಿದೆ” ಎಂದು ತಿಳಿಸಿದ್ದಾರೆ.
“ಈ ಘಟನೆ ಕುರಿತು ಯಾವುದೇ ಇತರ ವದಂತಿಗಳಿಗೆ ಕಿವಿಗೊಡುವುದು ಅನಗತ್ಯ. ಈ ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಒಬ್ಬರು ಎಸ್‌ಐಎ, 3 ಎಫ್‌ಎಸ್‌ಎಲ್ ತಂಡದ ಸಿಬ್ಬಂದಿ, ಇಬ್ಬರು ಕ್ರೈಮ್ ಸೀನ್ ಫೋಟೋಗ್ರಾಫರ್‌ಗಳು, ಇಬ್ಬರು ರೆವೆನ್ಯೂ ಅಧಿಕಾರಿಗಳು ತಂಡದ ಭಾಗವಾಗಿದ್ದರು” ಎಂದು ವಿವರಿಸಿದರು.
“27 ಪೊಲೀಸ್ ಸಿಬ್ಬಂದಿ, ಇಬ್ಬರು ರೆವೆನ್ಯೂ ಅಧಿಕಾರಿಗಳು ಮತ್ತು ಸಂಬಂಧಿತ ಪ್ರದೇಶದ 3 ನಾಗರಿಕರು ಗಾಯಗೊಂಡಿದ್ದಾರೆ, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಡ ತೀವ್ರವಾಗಿ ಹಾನಿಗೊಳಗಾಗಿದ್ದು, ದುರಂತಕ್ಕೆ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ” ಎಂದು ಹೇಳಿದ್ದಾರೆ.
ಗೃಹ ಸಚಿವಾಲಯ ಸ್ಪಷ್ಟನೆ: ಕೇಂದ್ರ ಗೃಹ ಸಚಿವಾಲಯದ ಜಮ್ಮು & ಕಾಶ್ಮೀರ ವಿಭಾಗದ ಜಂಟಿ ಕಾರ್ಯದರ್ಶಿ ಪ್ರಶಾಂತ್ ಲೋಖಂಡೆ ಘಟನೆ ಕುರಿತು ವಿವರ ನೀಡಿದ್ದಾರೆ. “ನವೆಂಬರ್ 14ರಂದು ರಾತ್ರಿ ಒಂದು ದುರದೃಷ್ಟಕರ ಆಕಸ್ಮಿಕ ಘಟನೆ ಜಮ್ಮು ಮತ್ತು ಕಾಶ್ಮೀರದ ನೌಗಾಮ್ ಪೊಲೀಸ್ ಸ್ಟೇಷನ್ ಒಳಗೆ ನಡೆದಿದ್ದು, ಭಾರೀ ಸ್ಫೋಟ ಸಂಭವಿಸಿದೆ” ಎಂದು ಹೇಳಿದ್ದಾರೆ.
“ಪೊಲೀಸರು ಉಗ್ರ ಜಾಲವನ್ನು ಪತ್ತೆ ಮಾಡಿ 2025ರ ಎಫ್‌ಐಆರ್ 162ರ ತನಿಖೆಯನ್ನು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಮತ್ತು ರಾಸಾಯನಿಕಗಳನ್ನು ಸಂಗ್ರಹ ಮಾಡಲಾಗಿತ್ತು. ಇದನ್ನು ಠಾಣೆಯ ಮುಕ್ತ ಪ್ರದೇಶದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ತನಿಖೆಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಸಂಘಟಿತ ಮತ್ತು ವೈಜ್ಞಾನಿಕ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ” ಎಂದು ತಿಳಿಸಿದ್ದಾರೆ.
“ಮುಂದಿನ ಪ್ರಕ್ರಿಯೆಯ ಭಾಗವಾಗಿ ಪತ್ತೆಯಾದ ರಾಸಾಯನಿಕ ಮತ್ತು ಸ್ಫೋಟಕ ನಮೂನೆಗಳನ್ನು ಹೆಚ್ಚಿನ ಫೋರೆನ್ಸಿಕ್ ಮತ್ತು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಭಾರೀ ಪ್ರಮಾಣದ ಪತ್ತೆಯ ಕಾರಣದಿಂದ, ಈ ಪ್ರಕ್ರಿಯೆಯನ್ನು ಕಳೆದ 2 ದಿನಗಳಿಂದ ನಿರಂತರವಾಗಿ ಮಾರ್ಗಸೂಚಿ ಅನುಸರಿಸಿ ನಡೆಸಲಾಗುತ್ತಿತ್ತು. ಇದನ್ನು ತಜ್ಞರ ಮೇಲ್ವಿಚಾರಣೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿತ್ತು” ಎಂದು ವಿವರಿಸಿದ್ದಾರೆ.
“ಆದರೆ, ಈ ಪ್ರಕ್ರಿಯೆಯ ಸಂದರ್ಭದಲ್ಲಿ ಒಂದು ಆಕಸ್ಮಿಕ ಸ್ಫೋಟ ಸಂಭವಿಸಿತು. ಈ ಆಕಸ್ಮಿಕ ಘಟನೆಯಲ್ಲಿ 9 ಜನರು ಜೀವವನ್ನು ಕಳೆದುಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ, ರೆವೆನ್ಯೂ ಅಧಿಕಾರಿಗಳು ಮತ್ತು 3 ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಪೊಲೀಸ್ ಠಾಣೆ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಘಟನೆಗೆ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ ಆದರೆ, ಈ ಘಟನೆಯ ಬಗ್ಗೆ ಯಾವುದೇ ಇತರ ಊಹಾಪೋಹಗಳು ಅನಗತ್ಯ. ಸರ್ಕಾರವು ಸ್ಪೋಟದಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರು, ಗಾಯಾಳುಗಳ ಜೊತೆ ಸದಾ ನಿಂತಿದೆ” ಎಂದು ಭರವಸೆ ಕೊಟ್ಟಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


