ನಿನ್ನೆ ( ಡಿಸೆಂಬರ್ 14 ) ಬಹು ನಿರೀಕ್ಷಿತ ಬಿಗ್‌ಬ್ಯಾಷ್ ಲೀಗ್ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಪರ್ತ್ ಸ್ಕಾರ್ಚರ್ಸ್ ಶುಭಾರಂಭ ಮಾಡಿದೆ.
ಇಂದು ಟೂರ್ನಿಯ ಎರಡನೇ ಪಂದ್ಯ ನಡೆದಿದ್ದು, ಮೆಲ್ಬೋರ್ನ್ ರೆನೆಗೇಡ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿದ್ದವು. ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ 14 ರನ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ಟಿಮ್ ಸೈಫರ್ಟ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಎದುರಾಳಿ ಬ್ರಿಸ್ಬೇನ್ ಹೀಟ್ ತಂಡಕ್ಕೆ 213 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಬ್ರಿಸ್ಬೇನ್ ಹೀಟ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿತು.
ಇನ್ನು ಈ ಪಂದ್ಯದ ಮೂಲಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಬಿಬಿಎಲ್ ಪಂದ್ಯವನ್ನಾಡಿದರು. ಆದರೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಶಾಹಿನ್ ಅಫ್ರಿದಿ ಬೌಲಿಂಗ್ ಮಾಡುವುದರಿಂದ ಅಮಾನತ್ತಾದ ಮುಖಭಂಗಕ್ಕೆ ಒಳಗಾಗಿದ್ದಾರೆ.
ಪಂದ್ಯದಲ್ಲಿ 2 ಓವರ್ ಬೌಲಿಂಗ್ ಮಾಡಿದ್ದ ಶಾಹಿನ್ ಅಫ್ರಿದಿ 28 ರನ್ ನೀಡಿ ದುಬಾರಿಯಾಗಿದ್ದರು. ಹೀಗಿರುವಾಗ ತಮ್ಮ ಪಾಲಿನ ಮೂರನೇ ಓವರ್ ಹಾಕಲು ಅಫ್ರಿದಿ 18ನೇ ಓವರ್‌ಗೆ ಚೆಂಡು ಹಿಡಿದು ಕಣಕ್ಕಿಳಿದರು. ಓವರ್‌ನ ಮೊದಲ ಎಸೆತದಲ್ಲೆ ಓಲಿವರ್ ಪೀಕ್ ಬಳಿ ಸಿಕ್ಸರ್ ಚಚ್ಚಿಸಿಕೊಂಡ ಶಾಹಿನ್ ಅಫ್ರಿದಿ ಮೂರನೇ ಎಸೆತದಲ್ಲಿ ಟಿಮ್ ಸೈಫರ್ಟ್‌ಗೆ ಮಾರಕ ಫುಲ್‌ಟಾಸ್ ಎಸೆದರು. ಇದಕ್ಕೆ ನೋಬಾಲ್ ಎಂದು ತೀರ್ಪು ನೀಡಿದ ಅಂಪೈರ್ ವಾರ್ನಿಂಗ್ ಅನ್ನೂ ಸಹ ನೀಡಿದರು. ಆದರೆ ಮತ್ತೆ ಅದೇ ಓವರ್‌ನ ಐದನೇ ಎಸೆತಕ್ಕೆ ಮತ್ತೊಂದು ಮಾರಕ ಫುಲ್‌ಟಾಸ್ ಎಸೆದ ಅಫ್ರಿದಿ ನಿಯಮ ಉಲ್ಲಂಘಿಸಿದರು. ಈ ಕಾರಣಕ್ಕೆ ಅಂಪೈರ್ ತಕ್ಷಣವೇ ಅಫ್ರಿದಿಯಿಂದ ಚೆಂಡನ್ನು ಪಡೆದು ಬೌಲಿಂಗ್‌ನಿಂದ ಅಮಾನತ್ತು ಮಾಡಿದರು.
ಹೀಗಾಗಿ ತನ್ನ ಪಾಲಿನ ಎಲ್ಲ ಓವರ್ ಬೌಲಿಂಗ್ ಮಾಡಲಾಗದ ಶಾಹಿನ್ ಅಫ್ರಿದಿ 2.4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೇ ಬರೋಬ್ಬರಿ 43 ರನ್ ನೀಡಿ ದುಬಾರಿಯಾದರು ಹಾಗೂ ಬಿಬಿಎಲ್ ಪದಾರ್ಪಣೆಯ ಪಂದ್ಯದಲ್ಲಿಯೇ ಅಮಾನತ್ತಿನ ಮುಖಭಂಗವನ್ನೂ ಸಹ ಅನುಭವಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


